ಮಲೆಮನೆಗೆ ಭೇಟಿ ನೀಡಿದ ಸಚಿವ ಅಂಗಾರ: ನಿರಾಶ್ರಿತರಿಂದ ಕ್ಲಾಸ್

ಚಿಕ್ಕಮಗಳೂರು: ಕಳೆದ 2019ರಲ್ಲಿ ಭೀಕರ ಮಳೆಯಿಂದಾಗಿ ಭೂಕುಸಿತಗೊಂಡು ತೀವ್ರ ಹಾನಿ, ಅವಘಡಗಳು ಸಂಭವಿಸಿದ್ದ ಮಲೆಮನೆ ಗ್ರಾಮಕ್ಕೆ ಉಸ್ತುವಾರಿ ಸಚಿವ ಅಂಗಾರ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿನೀಡಿದ್ದ ವೇಳೆ ಸಂತ್ರಸ್ತರು ತೀವ್ರ ತರಾಟೆಗೆ ತೆಗೆದುಕೊಂಡರು.
ಮೂರು ವರ್ಷಗಳಾಗಿದ್ದರೂ ಮನೆ ಕಟ್ಟಿಕೊಟ್ಟಿಲ್ಲ. ಮನೆ ಕಳೆದುಕೊಂಡವರಿಗೆ ಬಾಡಿಗೆ ರೂಪದಲ್ಲಿ ಹಣ ಕೊಡುವುದೆಂಬ ಸರ್ಕಾರದ ಭರವಸೆ, ಕೇವಲ ಭರವಸೆಯಾಗೇ ಉಳಿದಿದೆ. ಅಂದು ಭೇಟಿಕೊಟ್ಟು ಹೋದವರು ಮೂರು ವರ್ಷಗಳಾದ ನಂತರ ಈಗ ಬಂದು ಇಲ್ಲೇನಾಗಿದೆ ಎಂಬಂತೆ ನೋಡತೊಡಗಿದ್ದಾರೆ. ನಿರಾಶ್ರಿತರನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಐದು ಮನೆಗಳು, 40 ಎಕರೆ ಜಮೀನು ಸಂಪೂರ್ಣ ಕೊಚ್ಚಿ ಹೋಗಿದೆ. ನಿರಾಶ್ರಿತರು ತೀವ್ರ ಸಂಕಷ್ಟದಲ್ಲಿ ಬದುಕುತ್ತಿದ್ದೇವೆ. ಇನ್ನಾದರೂ ಸೂಕ್ತ ಪರಿಹಾರ ಕೊಡಿ. ಇಲ್ಲವಾದಲ್ಲಿ ನಮಗೆ ಆತ್ಮಹತ್ಯೆಯೊಂದೇ ದಾರಿಯಾಗಲಿದೆ ಎಂದು ನಿರಾಶ್ರಿತರು ಎಚ್ಚರಿಕೆ ನೀಡಿದರು.
ಈ ವೇಳೆ ಉಸ್ತುವಾರಿ ಸಚಿವ ಅಂಗಾರ ಜನರ ಮನವೊಲಿಸಿ ಮಾತನಾಡಿ, ನಿರಾಶ್ರಿತರನ್ನು ಕಡೆಗಣಿಸಿಲ್ಲ. ಸಮಸ್ಯೆಗಳ ವಾಸ್ತವ ತಿಳಿಯಲು ನಾವು ಭೇಟಿಕೊಟ್ಟಿದ್ದೇವೆ. ಇನ್ನೆರಡು ದಿನಗಳೊಳಗೆ ಮುಖ್ಯಮಂತ್ರಿಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ಕೊಟ್ಟರು.




