ಚಿಕ್ಕಮಗಳೂರು

ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರವಾಗಬೇಕು; ಕೆಡಿಪಿ ಸಭೆಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ಸಚಿವ ಅಂಗಾರ ಚಾಟಿ

ಚಿಕ್ಕಮಗಳೂರು: ಅಧಿಕಾರಿಗಳು ಸೂಕ್ತ ಮಾಹಿತಿ ತಾರದೆ ಕೆಡಿಪಿ ಸಭೆಗೆ ಏಕೆ ಬರುತ್ತೀರಿ? ಜವಾಬ್ದಾರಿಯಿಂದ ತಮ್ಮ ಕರ್ತವ್ಯ ಪಾಲಿಸುತ್ತಿಲ್ಲವೇಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ವಿವಿಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನೆಯ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಅಧಿಕಾರಿಗಳಿಗೆ ಚಾಟಿ ಬೀಸಿದ ಅವರು, ಅಧಿಕಾರಿಗಳು ಮಾಹಿತಿಯನ್ನು ಕೆಳಹಂತದ ಅಧಿಕಾರಿಗಳಿಂದಲೂ ಕಲೆಹಾಕಿಕೊಂಡು ಬರಬೇಕು ಎಂದು ಸೂಚಿಸಿದರು.

ಡೀಮ್ಡ್ ಫಾರೆಸ್ಟ್:
ಡೀಮ್ಡ್ ಫಾರೆಸ್ಟ್ ವಿಷಯ ಪ್ರಸ್ತಾಪಿಸಿದ ಅವರು, ಕಂದಾಯ, ಅರಣ್ಯ ಇಲಾಖೆಗಳು ಹಾಗೂ ಗ್ರಾಮ ಪಂಚಾಯಿತಿ, ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ನಡೆಸಿ, ಸಮಸ್ಯೆ ಪರಿಹರಿಸಲು ಶೀಘ್ರವೇ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟಿಗೆ ಒಳಪಡುವ 52900 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ. ಇವು ಜನವಸತಿ ಪ್ರದೇಶ, ಅಂಗನವಾಡಿ, ಶಾಲೆ, ಸ್ಮಶಾನ ಜಾಗ ಒಳಗೊಂಡಂತೆ ಅಭಿವೃದ್ಧಿ ಕೆಲಸಗಳಿಗೆ ಜಾಗವನ್ನು ಮೀಸಲಿರಿಸಿ, ಅರಣ್ಯ, ಡೀಮ್ಡ್ ಫಾರೆಸ್ಟ್, ಕಂದಾಯ ಭೂಮಿ ಯಾವುದು ಎಂಬುದನ್ನು ಸರಿಯಾಗಿ ವಿಂಗಡಿಸುವಂತೆ ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಅವರು, ಶೀಘ್ರವೇ ಅರಣ್ಯ ಸಚಿವರನ್ನು ಜಿಲ್ಲೆಗೆ ಕರೆಸಿ, ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ 13 ಅಮೃತಮಹಲ್ ಕಾವಲುಗಳ 14339 ಎಕರೆ ಪ್ರದೇಶದಲ್ಲಿ 4514 ಎಕರೆ ಒತ್ತುವರಿಯಾಗಿದೆ. 248 ಎಕರೆ ಈಗಾಗಲೇ ತೆರವುಗೊಳಿಸಿದ್ದು, ಬಾಕಿ ಇರುವ 4266 ಎಕರೆ ತೆರವುಗೊಳಿಸಬೇಕು ಎಂದು ಸಚಿವ ಅಂಗಾರ ಸೂಚಿಸಿದರು.

ಮೂಡಿಗೆರೆ ತಾಲೂಕು ಮರಸಣಿಗೆ ಗ್ರಾಮದ ನಿವಾಸಿಯೋರ್ವರು 30 ಎಕರೆ ಡೀಮ್ಡ್ ಫಾರೆಸ್ಟ್ ಒತ್ತುವರಿ ಮಾಡಿದ್ದಾರೆ. ಆದರೆ ತೆರವು ಮಾಡಿಲ್ಲ ಎಂಬ ವಿಧಾನಪರಿಷತ್ ಸದಸ್ಯ ಭೋಜೇಗೌಡ ಆರೋಪಿಸಿದರು.

ಇದಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಉತ್ತರಿಸಿ, ಪ್ರಕರಣ ನ್ಯಾಯಾಲಯದ ಹಂತದಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕುದುರೇಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸುಮಾರು 426 ಕುಟುಂಬಸ್ಥರು ಸ್ವಇಚ್ಛೆಯಿಂದ ಸ್ಥಳಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ತ್ವರಿತವಾಗಿ ಪರಿಹಾರ ಒದಗಿಸಿರಿ ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಮೃತ್ ಕಾಮಗಾರಿ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಅಮೃತ್ ಕಾವಲು ಭೂಮಿ ಒತ್ತುವರಿಯನ್ನು ಕಾನೂನು ಪ್ರಕಾರ ಕೂಡಲೇ ತೆರವುಗೊಳಿಸಬೇಕು. ಕೋವಿಡ್ ನಿಯಂತ್ರಣಕ್ಕೆ ಆಸ್ಪತ್ರೆಗಳಿಗೆ ನೀಡಲಾಗಿರುವ ವೆಂಟಿಲೇಟರ್ ಕಾರ್ಯನಿರ್ವಹಿಸದೆ ನಿಷ್ಪ್ರಯೋಜಕವಾಗಿವೆ. ಕೈಮರ ಟೋಲ್ ಮೂಲಕ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಸೋಂಕು ಹರಡುವ ಸಂಭವವಿದೆ. ಪ್ಲಾಸ್ಟಿಕ್ ನಿಷೇಧವು ಸರ್ಕಾರಿ ಕಚೇರಿಗಳಿಂದಲೇ ಆರಂಭವಾಗಬೇಕು ಎಂದು ಆಗ್ರಹಿಸಿದರು.

ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಜಿಲ್ಲಾಧಿಕಾರಿ ರಮೇಶ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿಖಾ, ಎಸ್ಪಿ ಎಂ.ಎಚ್.ಅಕ್ಷಯ್, ಜಿಪಂ ಸಿಇಒ ಜಿ.ಪ್ರಭು ಹಾಜರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button