ನಗರವಾಸ ಸಾಕಾಗಿ ಕಾಲ್ಕಿತ್ತ ಗಜರಾಜ!

ವರದಿ: ಕಿರುಗುಂದ ರಫೀಕ್
ಚಿಕ್ಕಮಗಳೂರು: ಮೂರು ದಿನಗಳ ಕಾಲ ನಗರದ ವಿವಿಧ ಬಡಾವಣೆಗಳಲ್ಲಿ ವಾಸ್ತವ್ಯ ಹೂಡಿ, ಜನರನ್ನು ಆತಂಕಗೊಳಿಸಿದ್ದ ಗಜರಾಜ ಕೊನೆಗೂ ನಗರದಿಂದ ಕಾಲ್ಕಿತ್ತಿದೆ. ಬಂದ ದಾರಿಯಲ್ಲೇ ವಾಪಸಾಗಿ ಬೇಲೂರು ತಾಲೂಕಿನ ಅರೇಹಳ್ಳಿ ಭಾಗದತ್ತ ಸಾಗಿದೆ. ಅಂತೂ ಚಿಕ್ಕಮಗಳೂರು ನಗರದ ಜನ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ಆಹಾರಕ್ಕಾಗಿ ಅರಸಿಯೋ, ಹಾದಿ ತಪ್ಪಿಯೋ ನಗರಕ್ಕೆ ಬಂದಿದ್ದ ಕಾಡಾನೆಗೆ ಎಲ್ಲಂದರಲ್ಲಿ ಕಾಣಿಸುತ್ತಿದ್ದ ಮನೆ, ಕಟ್ಟಡಗಳು, ಮನುಷ್ಯರು ಓಡಾಟ, ವಾಹನಗಳ ಶಬ್ದ ಕೇಳಿ ಕಸಿವಿಸಿ ಉಂಟಾಗಿದೆ. ಅಲ್ಲದೆ ಹಿಂಬದಿಯಲ್ಲೇ ಯೂನಿಫಾರ್ಮ್ ಹಾಕಿಕೊಂಡು ಬೆನ್ನುಬಿದ್ದಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಾಗ ಪಟಾಕಿ ಸಿಡಿಸಿ ಶಬ್ದ ಮಾಡಿ ಆನೆಯನ್ನು ಕಾಡಿನತ್ತ ಓಡಿಸುವ ಪ್ರಯತ್ನದಲ್ಲಿದ್ದರು. ಕಾಡಾನೆಗೆ ಪಟಾಕಿ ಶಬ್ದ ಹೊಸದೇನಲ್ಲ. ಏಕೆಂದರೆ, ಆಗಾಗ ಕಾಡಂಚಿನ ಗ್ರಾಮಗಳಿಗೆ ಹೆಜ್ಜೆಯಿಡುವಾಗ ಅರಣ್ಯಸಿಬ್ಬಂದಿಗಳು ಪಟಾಕಿ ಸಿಡಿಸುವುದು ಮಾಮೂಲಾಗಿದೆ. ಆ ಶಬ್ದವನ್ನು ಕಿವಿಗೇ ಹಾಕಿಕೊಳ್ಳದ ಗಜರಾಜ ನಗರವ್ಯಾಪ್ತಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುತ್ತಾಟ ನಡೆಸತೊಡಗಿತ್ತು.
ಸುಮಾರು 15ರಿಂದ 20ವರ್ಷದ ಗಂಡಾನೆ. ಇದು ಯಾವುದೋ ಅಭಯಾರಣ್ಯದಿಂದ ಬಂದಿದ್ದಲ್ಲ. ಬೇಲೂರು ತಾಲೂಕಿನ ಕಾಫಿ ಎಸ್ಟೇಟ್ಗಳಲ್ಲಿ, ಸಣ್ಣಪುಟ್ಟ ತೋಪು, ಫಾರೆಸ್ಟ್ನಲ್ಲಿ ಓಡಾಡಿಕೊಂಡಿತ್ತು. ಅಲ್ಲಿಂದ ಹೇಗೋ ತನ್ನ ದೈನಂದಿನ ಟ್ರಾಕ್ ತಪ್ಪಿ ಚಿಕ್ಕಮಗಳೂರು ನಗರದತ್ತ ಕಾಲಿಟ್ಟಿತ್ತು. ಇಂದಾವರ, ನಲ್ಲೂರು ಕೆರೆ, ಮತ್ತಾವರ ಮೂಲಕ ನಗರಕ್ಕೆ ಪ್ರವೇಶಿಸಿತ್ತು. ಹಾದಿಯಲ್ಲಿ ಸಿಕ್ಕ ಭತ್ತ, ಕಬ್ಬಿನ ಗದ್ದೆಗಳನ್ನು ತುಳಿದು ಹಾನಿಮಾಡಿತ್ತು.
ಬಂದ ದಾರಿಯಲ್ಲೇ ಹಿಂದಡಿ:
ನಗರವಾಸ ಸಾಕಾಗಿ ಸೋಮವಾರ ಸಂಜೆ ಮತ್ತಾವರದ ಕುರುಚಲು ಕಾಡಿನಲ್ಲಿ ಸೇರಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೇಲೂರು ತಾಲೂಕಿನ ಅರೇಹಳ್ಳಿ ಭಾಗಕ್ಕೆ ಓಡಿಸಿದ್ದಾರೆ. ಅಲ್ಲಿಂದ ತನ್ನ ದೈನಂದಿನ ಟ್ರಾಕ್ ಹಿಡಿದು ಅದೇ ಟ್ರಾಕ್ ನಲ್ಲಿ ವಾಪಸಾಗಿದೆ.
“ಕಾಡಾನೆಯನ್ನು ನಿಯಂತ್ರಿಸಿ ಬಂದ ದಾರಿಯಲ್ಲೇ ಹಿಂತಿರುಗಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ. ನಿನ್ನೆ ಸಂಜೆ ಮತ್ತಾವರದ ಕುರುಚಲು ಕಾಡಿನಲ್ಲಿ ಇತ್ತು. ಸಿಬ್ಬಂದಿಗಳು ಪಟಾಕಿ ಸಿಡಿಸುತ್ತ ಅಲ್ಲಿಂದ ಮತ್ತಾವರ ಸ್ಟೇಟ್ ಫಾರೆಸ್ಟ್, ಆಲದಗುಡ್ಡೆ ಮಾರ್ಗವಾಗಿ ವಸ್ತಾರೆ ಜಂಕ್ಷನ್ನಿಗೆ ಮೊದಲು ಗದ್ದೆ ಬಯಲು ನಂತರ ಕೆ.ಆರ್.ಪೇಟೆ ಒಲಗೇರಳ್ಳಿ ಮೂಲಕ ಅರೇಹಳ್ಳಿ ಭಾಗಕ್ಕೆ ಹೋಗಿದೆ. ಪಟಾಕಿ ಸಿಡಿಸುವ ಮೂಲಕ ಓಡಿಸಲಾಯಿತು. 98 ಮಂದಿ ಸಿಬ್ಬಂದಿಗಳು 5 ವಾಹನಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಯಿತು”
-ಜಗನ್ನಾಥ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಕಾಡಾನೆಗಳ ಹಾವಳಿ ತಪ್ಪುತ್ತಲೇ ಇಲ್ಲ. ಸರ್ಕಾರ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವತ್ತ ಕಿಂಚಿತ್ತೂ ಯೋಚಿಸದೆ, ರೈತರ, ಜನಸಾಮಾನ್ಯರ ಜೀವದೊಂದಿಗೆ ಚೆಲ್ಲಾಟವಾಡುವುದೇ ಮುಂದುವರಿದಿದೆ.




