ಹಕ್ಕುಪತ್ರ ವಿತರಣೆ ಸಂಬಂಧ ಜಿಲ್ಲಾಧಿಕಾರಿ ಆದೇಶದಲ್ಲಿ ಗೊಂದಲ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಫಾರಂ 50, 53, 94ಸಿಸಿ ಹಕ್ಕುಪತ್ರಗಳನ್ನು ವಿತರಿಸುವಾಗ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು ಹಕ್ಕುಪತ್ರ ನೀಡಬೇಕೆಂದು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಗೊಂದಲಕ್ಕೀಡಾಗಿದ್ದು ಜನರಿಂದ ಟೀಕೆಗೆ ಗುರಿಯಾಗಿದೆ.
ಜಿಲ್ಲೆಯ ಶೃಂಗೇರಿ ಕ್ಷೇತ್ರದ 3 ತಾಲೂಕುಗಳು ಸೇರಿದಂತೆ ಮೂಡಿಗೆರೆ ತಾಲೂಕು ತಹಸೀಲ್ದಾರ್ ಅವರಿಗೆ ಅ.31ರಂದು ಆದೇಶ ನೀಡಲಾಗಿದೆ. ಆದೇಶ ನೀಡುವ ಮೊದಲು ಜಿಲ್ಲೆಯ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಸೇರಿದಂತೆ ಮಲೆನಾಡಿನ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಜಿಲ್ಲಾಧಿಕಾರಿಗಳೇ ಈ ಆದೇಶವನ್ನು ಹೊರಡಿಸಿದ್ದಾರೋ ಅಥವಾ ಪರೋಕ್ಷವಾಗಿ ಇವರೇ ಹೊರಡಿಸುವಂತೆ ಅವರಿಗೆ ಮಾರ್ಗದರ್ಶನ ನೀಡಿದ್ದಾರೋ ಎಂಬ ಬಗ್ಗೆ ಚರ್ಚೆಯಾಗಬೇಕಿದೆ ಎನ್ನುವ ಅಭಿಪ್ರಾಯ ಹೊರಬಿದ್ದಿದೆ. ಈ ಆದೇಶದಿಂದ ಯಾವುದೇ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ಜನರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.
ಫಾರಂ 50, 53, 94ಸಿಸಿ ಹಕ್ಕುಪತ್ರ ಜನರಿಗೆ ಸಿಗದಿದ್ದಲ್ಲಿ ಅದಕ್ಕೆ ಜನಪ್ರತಿನಿಧಿಗಳೇ ಹೊಣೆ ಎಂದು ಆರೋಪಿಸಿರುವ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳಿ ಕೂಡಲೇ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.




