ಚಿಕ್ಕಮಗಳೂರುಜಿಲ್ಲಾ ಸುದ್ದಿ
ವಿವಾಹ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಹೆಗ್ಡೆ ನಮನ

ಚಿಕ್ಕಮಗಳೂರು: ಸಿದ್ಧಾರ್ಥ ಹೆಗ್ಡೆ ಅವರ ಸಂಸ್ಥೆಯಲ್ಲಿ ಉದ್ಯೋಗಿಯಾಗಿ, ಉತ್ತಮ ಬದುಕು ಕಟ್ಟಿಕೊಂಡಿರುವ ಮಧುಮಗನೊರ್ವ ವೇದಿಕೆಯಲ್ಲಿ ಸಿದ್ಧಾರ್ಥ ಅವರಿಗೆ ನುಡಿನಮನ ಸಲ್ಲಿಸಿ , ತನ್ನ ವಿವಾಹವನ್ನು ವಿಶೇಷವಾಗಿ ಆಯೋಜಿಸಿ, ಎಲ್ಲರ ಗಮನ ಸೆಳೆದಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ನಿಡ್ನಳ್ಳಿ ಸಮೀಪದ ಹೊಳೆಕೂಡಿಗೆ ಗ್ರಾಮದ ಸಂತೋಷ್ ಹಾಗೂ ಬಾಳೆಹೊನ್ನೂರು ಗಡಿಗೇಶ್ವರದ ಪ್ರಮೀತಾ ಅವರ ವಿವಾಹದ ನಿಮಿತ್ತ ಮಧುಮಗ ಸಂತೋಷ್ ಅವರ ಮನೆ ಹೊಳೆಕೂಡಿಗೆಯಲ್ಲಿ ಮೆಹಂದಿ ಶಾಸ್ತ್ರದ ಸಂದರ್ಭದಲ್ಲಿ ವೇದಿಕೆಯಲ್ಲಿ ಸಿದ್ಧಾರ್ಥ ಹೆಗ್ಡೆ ಅವರ ಭಾವಚಿತ್ರವನ್ನು ಇಟ್ಟು ಪುಷ್ಪನಮನ ಸಲ್ಲಿಸಿದ್ದಾರೆ.
ಈ ವೇಳೆ ಮಧುಮಗ ಸಂತೋಷ್ ಮಾತನಾಡಿ, ಬಡಕುಟುಂಬದಿಂದ ಬಂದ ತನಗೆ ಸಿದ್ಧಾರ್ಥ ಹೆಗ್ಡೆ ಅವರು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಿದ್ದರಿಂದ ತಾನು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದರು. ವಿವಾಹಕ್ಕೆ ಆಗಮಿಸಿದ್ದ ಅನೇಕ ಹಿರಿಯರು ಸಿದ್ಧಾರ್ಥ ಹೆಗ್ಗಡೆ ನಡೆದ ಹಾದಿ, ಅವರ ಬದುಕು, ಬಡವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಸಂದರ್ಭಗಳನ್ನು ಸ್ಮರಿಸಿದರು.




