Farmers Protest: ಕೇಂದ್ರ ಸರ್ಕಾದ ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ರೈತರ ಪ್ರತಿಭಟನೆ

ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳಲ್ಲಿ ಒಂದಾಗಿರುವ ವಿದ್ಯುಚ್ಛಕ್ತಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಲು ಅಗ್ರಹಿಸಿ, ಧಾರವಾಡದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಮೂವತ್ತಕ್ಕೂ ಹೆಚ್ಚು ರೈತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುವಲ್ಲಿ ಹೆಚ್ಚು ಗಮನಹರಿಸುತ್ತಿದೆ. ವಿದ್ಯುಚ್ಛಕ್ತಿಯನ್ನು ಭಾರತ ಸರ್ಕಾರ ಕಾರ್ಪೋರೇಟ್ ಕಂಪೆನಿಗಳಿಗೆ ಕೊಡುವಂತಹ ತೀರ್ಮಾನ ಕೈಗೊಂಡಿದೆ. ಇದರಿಂದ ದೇಶದ ಕೃಷಿ ವಲಯದ ಮೇಲೆ ದುಷ್ಪರಿಣಾಮಗಳು ಹೆಚ್ಚಾಗಿ ಆಗುತ್ತವೆ ಎಂದರು.
ಕೃಷಿಯು ಲಾಭದಾಯಕವಲ್ಲದ ಕಾರಣಕ್ಕೆ ಕೃಷಿಯಿಂದ ರೈತರನ್ನು ಹೊರಹಾಕಲು ವಿದ್ಯುಚ್ಛಕ್ತಿ, ರಸಗೊಬ್ಬರಗಳನ್ನು ದುಬಾರಿಗೊಳಿಸಿ ಬಿತ್ತನೆ ಬೀಜಗಳನ್ನು ರೈತನಿಂದ ಕೈ ತಪ್ಪಿಸಿ ಅದನ್ನೂ ದುಬಾರಿಗೊಳಿಸಲು ಪ್ರಧಾನಿ ಮೋದಿಯವರು ಸಜ್ಜಾಗಿದ್ದಾರೆ. ಈ ರೀತಿಯ ಜನ ವಿರೋಧಿ ಸರ್ಕಾರವನ್ನು ಹದ್ದು ಬಸ್ತಿಗೆ ತರಲು ಜನರು ಬೀದಿಗಿಳಿಯುವ ಅವಶ್ಯಕತೆಯನ್ನು ಸರ್ಕಾರವೇ ಸೃಷ್ಟಿಸುತ್ತಿದೆ. ಆದ್ದರಿಂದ ವಿದ್ಯುಚ್ಛಕ್ತಿ ಖಾಸಗೀಕರಣ ಕೂಡಲೇ ವಾಪಸ್ ಪಡೆಯಬೇಕು ಎಂದು ರೈತರು ಒತ್ತಾಯಿಸಿದರು.




