ವೈದ್ಯರ ಮೇಲೆ ಹಲ್ಲೆಗೆ ಖಂಡನೆ; ತರೀಕೆರೆಯಲ್ಲಿ ಜೂ.6ರವರೆಗೆ ಆಸ್ಪತ್ರೆ-ಕ್ಲಿನಿಕ್ ಬಂದ್

ಚಿಕ್ಕಮಗಳೂರು: ವೈದ್ಯರೋರ್ವರ ಮೇಲೆ ದುಷ್ಕರ್ಮಿಗಳು ನಡೆಸಿರುವ ಮಾರಣಾಂತಿಕ ಹಲ್ಲೆ ಕೃತ್ಯವನ್ನು ಖಂಡಿಸಿ ವೈದ್ಯರುಗಳ ರಕ್ಷಣೆಗಾಗಿ ತರೀಕೆರೆ ತಾಲೂಕಿನಲ್ಲಿ ಅಭಿಯಾನ ನಡೆಸಲು ಐಎಂಎ ಮುಂದಾಗಿದೆ.
ಇಂತಹ ಕೃತ್ಯಗಳು ಎಲ್ಲೂ ನಡೆಯಬಾರದು. ಇದು ವೈದ್ಯಸಮೂಹದ ಮೇಲೆ ನಡೆಸಿದ ದೌರ್ಜನ್ಯ. ಕೋವಿಡ್-19 ಲಾಕ್ಡೌನ್ ಸಂಕಷ್ಟದಲ್ಲಿ ಜನ ತತ್ತರಿಸಿದ್ದಾರೆ. ಹೀಗಿರುವಾಗ ವೈದ್ಯರು ಜೀವದ ಹಂಗು ತೊರೆದು ಕರ್ತವ್ಯದಲ್ಲಿದ್ದಾರೆ. ಸರ್ಕಾರ ವೈದ್ಯರುಗಳಿಗೆ ರಕ್ಷಣೆ ಕೊಡದಿದ್ದರೆ ಪ್ರತಿಭಟನೆ ತೀವ್ರಗೊಳ್ಳಲಿದೆ. ತರೀಕೆರೆಯಲ್ಲಿ ಜೂ.6ರವರೆಗೆ ಆಸ್ಪತ್ರೆ-ಕ್ಲಿನಿಕ್ಗಳು ಬಂದ್ ಮಾಡಿ ಪ್ರತಿಭಟನೆ ನಡೆಸಲು ಐಎಂಎ ಮುಂದಾಗಿದೆ ಹಾಗೂ ಎಲ್ಲಾ ಸರ್ಕಾರಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಲು ಅಭಿಯಾನ ಆರಂಭಿಸಲಾಗಿದೆ. ಇಲ್ಲಿಯವರೆಗೆ ಅಭಿಯಾನಕ್ಕೆ 85 ಲಕ್ಷ ಸಹಿ ಸಂಗ್ರಹವಾಗಿದೆ. ಡಾ.ದೀಪಕ್ ಮೇಲಿನ ಹಲ್ಲೆಗೆ ನ್ಯಾಯ ಸಿಗದಿದ್ದಲ್ಲಿ ಬೆಂಗಳೂರಿನಲ್ಲೂ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ನಡೆದಿದ್ದೇನು?
ಎರಡು ದಿನಗಳ ಹಿಂದೆ ಮಕ್ಕಳ ತಜ್ಞ ದೀಪಕ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ವೇಣುಗೋಪಾಲ್, ನಿತಿನ್ ಹಾಗೂ ವೆಂಕಟೇಶ್ ಎಂಬವರನ್ನು ಬಂಧಿಸಿದ್ದಾರೆ.
ಅನಾರೋಗ್ಯದ ಏಳು ವರ್ಷದ ಬಾಲಕನೋರ್ವನನ್ನು ತರೀಕೆರೆಯ ಜಗದೀಶ್ವರ ಕ್ಲಿನಿಕ್ಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಬಾಲಕ ಮೃತಪಟ್ಟಿದ್ದ. ಇದರಿಂದ ರೊಚ್ಚಿಗೆದ್ದ ಬಾಲಕನ ಸಂಬಂಧಿ ವೇಣುಗೋಪಾಲ್ ತನ್ನ ಸ್ನೇಹಿತರೊಂದಿಗೆ ಸೇರಿ ವೈದ್ಯರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದ ಎಂದು ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.




