ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ನಾಯಕರು ಹಾಕಿದ ಟವಲ್ ಜನರೆ ತೆಗೆದು ಎಸೆದಿದ್ದಾರೆ: ನಳಿನ್ ಕುಮಾರ್ ಕಟೀಲ್

ಕಲಬುರಗಿ: ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರು ಟವಲ್ ಹಾಕುತ್ತಿದ್ದರು. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಿಸುವ ಮೂಲಕ ಜನರು ಟವಲ್ ತೆಗೆದು ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡುವತ್ತ ಜನರು ಒಲವು ತೋರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಹಮ್ಮಿಕೊಂಡ ಪಾಲಿಕೆಯ ನೂತನ ಬಿಜೆಪಿ ಸದಸ್ಸರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ ಅನ್ನೊದನ್ನು ಅರಿತ ಜನತೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡುವತ್ತ ಒಲವು ತೋರಿಸಿದ್ದಾರೆ. ಲೋಕಸಭಾ ಚುನಾವಣೆ ಸೋಲಿನ ನಂತರ ಕಲಬುರಗಿಗೆ ಬಾರದ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಗೆ ಬರುವದೇ ಬೇಡ, ಅಲ್ಲೆ ಬೆಂಗಳೂರಿನಲ್ಲಿಯೇ ಇರಲಿ ಅನ್ನೊ ಸಂದೇಶವನ್ನು ಇಲ್ಲಿನ ಜನ ಬಿಜೆಪಿಗೆ ಗೆಲ್ಲಿಸುವ ಮೂಲಕ ರವಾನಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿಎಸ್ ವೈ ಹಾಗೂ ಸಿಎಂ ಬೊಮ್ಮಾಯಿ ಅವರ ಮಾರ್ಗದರ್ಶನಲ್ಲಿ ಪಾಲಿಕೆ ಚುನಾವಣೆ ಗೆಲುವಾಗಿದೆ. ಕಲಬುರಗಿ ಜನರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಮುಂದಿನ ಮೇಯರ್ ಕೂಡ ನಾವೇ ಆಗ್ತಿವಿ. ಭ್ರಷ್ಟಾಚಾರ ರಹಿತ ಆಡಳಿತ ನಾವು ನೀಡುತ್ತೇವೆ ಎಂದು ಕಟೀಲ್ ಭರವಸೆ ನೀಡಿದರು.




