ಬೆಳಗಾವಿಯಲ್ಲಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ; ಸಚಿವ ಸಂಪುಟ ಒಪ್ಪಿಗೆ

ಬೆಳಗಾವಿ: ಬೆಳಗಾವಿಯಲ್ಲಿ ಈಗಾಗಲೇ ಕಾರ್ಯಾರಂಭವಾಗಿರುವ ಅಂತರರಾಷ್ಟ್ರೀಯ ಗುಣಮಟ್ಟದ ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 16.43 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಪ್ರಸ್ತಾವನೆಗೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕರ್ನಾಟಕ- ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಸೊಸೈಟಿ, ಜರ್ಮನಿರವರ ತಾಂತ್ರಿಕ ಸಹಯೋಗದೊಂದಿಗೆ ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಅಂತರಾಷ್ಟ್ರೀಯ ಗುಣಮಟ್ಟದ 5 ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಸ್ಥಾಪಿಸಲಾಗಿದೆ.
ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕರ್ನಾಟಕ- ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರವು ನಡೆಯುತ್ತಿದ್ದು, ಸ್ವಂತ ಕಟ್ಟಡ ಹೊಂದಲು ಜಮೀನು ಮಂಜೂರಾಗಿದ್ದು, ಕಟ್ಟಡ ನಿರ್ಮಾಣವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸಂಸ್ಥೆಗೆ ವಹಿಸಲು ಸಚಿವ ಸಂಪುಟ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ.
ಅಲ್ಪಾವಧಿ ಹಾಗೂ ದೀರ್ಘಾವಧಿ ತರಬೇತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸೇರಿದಂತೆ ಎಲ್ಲಾ ಸಮುದಾಯದ ಅಭ್ಯರ್ಥಿಗಳು ತರಬೇತಿ ಪಡೆದು ಸ್ವಾವಲಂಭಿಯಾಗಿ ಜೀವನ ನಡೆಸಲು ಅನುವಾಗಲಿದೆ. ಯುವ ಜನತೆಯು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇಂದಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಪರಿಣತಿ ಪಡೆದ ಅಭ್ಯರ್ಥಿಗಳು ಸ್ವಾವಲಂಬಿಗಳಾಗಿ ಜೀವನ ನಡೆಸಲು ವಿಪುಲ ಅವಕಾಶಗಳಿವೆ. ಅದಕ್ಕೆ ಪೂರಕವಾಗಿ ಉತ್ತಮ ಗುಣಮಟ್ಟದ ತರಬೇತಿಯನ್ನು ಈ ಕೇಂದ್ರವು ನೀಡಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರಜೋಳ ತಿಳಿಸಿದ್ದಾರೆ.




