ಫೆ.20 ರಿಂದ 2ನೇ ಹಂತದ ಮೇಕೆದಾಟು ಪಾದಯಾತ್ರೆ ಆರಂಭ: ಸಂಸದ ಡಿ ಕೆ ಸುರೇಶ್

ರಾಮನಗರ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದ ಮೇಕೆದಾಟು ಪಾದಯಾತ್ರೆಯನ್ನು ಆರ್ಧಕ್ಕೆ ಮೊಟಕುಗೊಳಿಸಿದ್ದರು. ಇದೀಗ ಮತ್ತೆ 2ನೇ ಹಂತದ ಪಾದಯಾತ್ರೆ ನಡೆಸಲು ಸಂಸದ ಡಿಕೆ ಸುರೇಶ್ ಸಜ್ಜಾಗಿದ್ದಾರೆ. ಫೆಬ್ರವರಿ 20ರಿಂದ 2ನೇ ಹಂತದ ಮೇಕೆದಾಟು ಪಾದಯಾತ್ರೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ನಮ್ಮ ಪಾದಯಾತ್ರೆಯನ್ನು ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ತಡೆದಿದೆ. ಆದರೆ, ಎಷ್ಟು ದಿನದ ವರೆಗೆ ನಮ್ಮ ಹೋರಾಟ ತಡೆಯುತ್ತಾರೆ ಎಂದು ಸರ್ಕಾರದ ವಿರುದ್ಧ ಚಾಟಿ ಬೀಸಿದರು. ಇನ್ನು, ರಾಮನಗರ ಜಿಲ್ಲೆ ಅಭಿವೃದ್ಧಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.
ಕೊರೊನಾ ಸೋಂಕಿನ ಪ್ರಕರಣ ಕಡಿಮೆ ಆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಟಫ್ ರೂಲ್ಸ್ಗಳನ್ನು ಹಿಂದಕ್ಕೆ ಪಡೆಯುತ್ತಿದೆ. ಆದರೆ, ಈ ವೇಳೆ ಪುನಃ ಪಾದಯಾತ್ರೆ ನಡೆಸಿದರೂ ಸೋಂಕು ಹರಡಲು ಮತ್ತೆ ಅನುವು ಮಾಡಿಕೊಟ್ಟಂತೆ ಆಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ 2ನೇ ಹಂತದ ಮೇಕೆದಾಟು ಪಾದಯಾತ್ರೆ ಯಾವ ರೂಪವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.



