ಕಾಂಗ್ರೆಸ್ ಕಿರಿಕ್ ಪಾರ್ಟಿ ಇದ್ದಂಗೆ, ಕಾಂಗ್ರೆಸ್ ನಲ್ಲಿ ಕಿರಿಕ್ ನಾಯಕರೆ ಇದ್ದಾರೆ : ಸಚಿವ ಶ್ರೀರಾಮಲು ಲೇವಡಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಒಂದು ಕಿರಿಕ್ ಪಾರ್ಟಿ ಇದ್ದಂಗೆ. ಕಾಂಗ್ರೆಸ್ ನಲ್ಲಿ ಕಿರಿಕ್ ನಾಯಕರೆ ಇದ್ದಾರೆ. ಬರೀ ಸುಳ್ಳು ಹೇಳುವದರಲ್ಲೆ ಕಾಂಗ್ರೆಸ್ ಪಕ್ಷ ಕಾಲಹರಣ ಮಾಡುತ್ತಿದೆ. ಇದರಿಂದಾಗಿಯೇ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಸಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿತಂ ಗೌಡ ಕಾಂಗ್ರೆಸ್ ಪಕ್ಷ ಸೇರಲು ಅಪ್ಲಿಕೇಷನ್ ಹಾಕಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, 10-20 ಜನ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಅಂತ ಹೇಳುತ್ತಿದ್ದಾರೆ. ಇದರ ಮೇಲೆ ಗೊತ್ತಾಗುತ್ತೆ ಕಾಂಗ್ರೆಸನವರು ಎಷ್ಟು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಸೋಲಿನ ಹತಾಶೆಯಿಂದ ಈ ರೀತಿ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
ಪ್ರಿತಂಗೌಡ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸುಳ್ಳನ್ನೆ ಹೇಳಿದ್ದಾರೆ. ಇಲ್ಲಿ ಅಷ್ಟೇ ಅಲ್ಲದೆ, ಗೋವಾದಲ್ಲಿ ಹೋಗಿ ಸುಳ್ಳು ಹೇಳ್ತಿದ್ದಾರೆ. ಕಾಂಗ್ರೆಸ್ ನವರು ಯಾವುದೇ ಸುದ್ದಿಯಲ್ಲಿಲ್ಲ, ಹಾಗಾಗಿ ಟಿಆರ್ಪಿಗಾಗಿ ಮಾದ್ಯಮದಲ್ಲಿ ಕಾಣಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇದೇ ವೇಳೆ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೊಬ್ಬರು ಹಿರಿಯ ನಾಯಕರು. ವಿರೋದ ಪಕ್ಷದ ನಾಯಕ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಗುವಂತಹ ಸಾಮರ್ಥ್ಯ ಹೊಂದಿದ್ದ ನಾಯಕ. ಆದರೆ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನ ಸಿದ್ದರಾಯಮ್ಯ ಮಾಡಿದ್ದಾರೆ. ಅವರ ಮತಗಳನ್ನು ಪಡೆದು ಅವರಿಗೆ ಮೋಸ ಮಾಡಿದರು. ರಾಜ್ಯದಲ್ಲಿ ಶೇಕಡಾ 18 ರಷ್ಟು ಮುಸ್ಲಿಂ ಸಮುದಾಯದ ಜನ ಇದ್ದಾರೆ. ಆದರೆ ಅವರಿಗೆ ಯಾವುದೇ ಸ್ಥಾನಮಾನವನ್ನ ಕಾಂಗ್ರೆಸ್ ನೀಡಲಿಲ್ಲ ಎಂದು ವ್ಯಂಗ್ಯವಾಡಿದರು.
