ಓದಿದವರು ಜಾತಿ ಮಾಡಬೇಡಿ; ಪರಧರ್ಮದ ಬಗ್ಗೆಯೂ ಸಹನೆಯಿರಲಿ: ಸಿದ್ದರಾಮಯ್ಯ

ಬಾಗಲಕೋಟೆ: ಜಾತಿ ರಹಿತವಾದ ಸಮಾಜ ನಿರ್ಮಾಣ ಮಾಡಬೇಕು ಅನ್ನೋದು ನಮ್ಮ ಆಶಯ.ಬರೀ ನಮ್ಮ ಧರ್ಮ ನಮ್ಮ ಧರ್ಮ ಎನ್ನುತ್ತಾರೆ. ನಮ್ಮ ಧರ್ಮ ಇಟ್ಕೊಳ್ರಪ್ಪ. ಪರಧರ್ಮದ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಿ ಎಂದು ಬಾದಾಮಿಯಲ್ಲಿ ವಿರೋಧ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಟ್ಯಾಬ್ ವಿತರಿಸಿ ಸಿದ್ದರಾಮಯ್ಯ ಮಾತನಾಡಿದರು. ನೀವೆಲ್ಲ ಪದವಿ ಶಿಕ್ಷಣ ಪಡಿತಾಯಿದ್ದೀರಿ, ಮೊದಲು ಮನುಷ್ಯತ್ವ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೆರೂರಿನಲ್ಲಿ ಇಲ್ಲಿಯವರೆಗೆ ಪ್ರಥಮ ದರ್ಜೆ ಕಾಲೇಜ್ ಗೆ ಹೊಸ ಕಟ್ಟಡ ಇಲ್ಲ. ಜಾಗ ಇಲ್ಲದ ಕಾರಣ ಕಟ್ಟಡ ಇರಲಿಲ್ಲ.ಕೆಐಡಿಬಿ ಇಂದ 29 ಎಕರೆ ಜಾಗೆ ಕೊಡಿಸಿದ್ದೀನಿ. ನಾಳೆಯಿಂದಲೇ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಕಟ್ಟಡ ಕಾಮಗಾರಿ ಆರಂಭವಾಗುತ್ತೆ ಎಂದರು.
ಬುದ್ದಿವಂತಿಕೆ ಯಾರಪ್ಪನ ಸ್ವತ್ತಲ್ಲ. ಪ್ರತಿಯೊಬ್ಬರು ಬುದ್ದಿವಂತಿಕೆನ ಬೆಳೆಸಿಕೊಳ್ಳಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಮೇಲ್ಜಾತಿಯಲ್ಲಿ ಹುಟ್ಟಿದ್ರಾ. ರಾಮಾಯಣ ಬರೆದವ್ರು ಮೇಲ್ಜಾತಿಯಲ್ಲಿ ಹುಟ್ಟಿದ್ರಾ. ವಾಲ್ಮೀಕಿ ಜಾತಿಯಲ್ಲಿ ಹುಟ್ಟಿದ್ರು. ಬುದ್ದಿವಂತಿಕೆ ಜಾತಿಯಿಂದ ಬರಲ್ಲ. ನಮ್ಮ ತಂದೆ ತಾಯಿ ಹೇಳ್ತಾರೆ. ನಿನಗ್ಯಾಕಪ್ಪ ಕುರಿ ಮೇಯಿಸು, ದನ ಮೇಯಿಸು ಅಂತಾ ಹೇಳ್ತಾರೆ.ಆದ್ರೆ ಪ್ರತಿಯೊಬ್ಬರೂ ವೈಚಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಓದಿದವರು ಜಾತಿ ಮಾಡಬೇಡಿ ಎಂದು ಹೇಳಿದರು.




