ಬಾಗಲಕೋಟೆ

ರನ್ನ ಸಕ್ಕರೆ ಕಾರ್ಖಾನೆ ದಿವಾಳಿ; ಅಧ್ಯಕ್ಷ ರಾಮಣ್ಣ ತಳೇವಾಡ ವಿರುದ್ಧ ಭ್ರಷ್ಟಾಚಾರದ ತನಿಖೆಗೆ ಮೀನಮೇಷ ಯಾಕೆ?

ವಿಶೇಷ ವರದಿ: ರಾಚಪ್ಪ ಬನ್ನಿದಿನ್ನಿ

ಬಾಗಲಕೋಟೆ: ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿತನ ಇದೀಗ ರಾಜಕಾರಣದ ಅಸ್ತ್ರವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಾಗಲಕೋಟೆ ಜಿಲ್ಲೆಯಲ್ಲೇ ಏಕೈಕ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮುಧೋಳ ತಾಲೂಕಿನ ತಿಮ್ಮಾಪುರ ಬಳಿ ರನ್ನ ನಗರದಲ್ಲಿ ಕಾರ್ಖಾನೆ ಸ್ಥಾಪನೆಯಾಗಿದೆ. ಸಕ್ಕರೆ ಕಾರ್ಖಾನೆಯನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಬದುಕುತ್ತಿದ್ದವು. ಆರ್ಥಿಕ ಸಂಕಷ್ಟದಿಂದ ಬಂದ್ ಆಗಿರುವ ಸಕ್ಕರೆ ಕಾರ್ಖಾನೆ ಕಾರ್ಮಿಕ ಕುಟುಂಬಗಳ ಹೊಟ್ಟೆ ಮೇಲೆ ಬರೆಬಿದ್ದಂತಾಗಿ ಬೀದಿಪಾಲಾಗಿವೆ.

ಅಧ್ಯಕ್ಷ ರಾಮಣ್ಣ ತಳೇವಾಡ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ

ಮುಧೋಳ ಮೀಸಲು ಕ್ಷೇತ್ರದ ಶಾಸಕ ಸದ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿಯಾಗಿದ್ದು ದುರದೃಷ್ಟಕರ. ಈ ಹಿಂದೆ 30ತಿಂಗಳ ಅವಧಿಗೆ ಗೋವಿಂದ ಕಾರಜೋಳ ಅವರು ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆಡಳಿತದಿಂದ ರೈತರು ಕೆಳಗಿಳಿಸಿದರು ಎನ್ನುವ ನೋವು ಗೋವಿಂದ ಕಾರಜೋಳರಗಿದೆ. ಇನ್ನು ಅಧಿಕಾರದಿಂದ ಕೆಳಗಿಳಿಯುವಾಗ 6ಕೋಟಿ ಸಾಲದ ಸುಳಿಯಲ್ಲಿ ಸಕ್ಕರೆ ಕಾರ್ಖಾನೆಯಿತ್ತು ಎನ್ನುವ ಆರೋಪವಿದೆ. ಆ ಬಳಿಕ ಗೋವಿಂದ ಕಾರಜೋಳ ಆಪ್ತ ರಾಮಣ್ಣ ತಳೇವಾಡ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಸೇರಿ 250 ಕೋಟಿ ಹಣದ ದುರುಪಯೋಗದ ಗಂಭೀರ ಆರೋಪ ರಾಮಣ್ಣ ತಳೇವಾಡ ವಿರುದ್ಧ ಕೇಳಿಬಂದಿದೆ.

ಬಿಜೆಪಿ ಸರ್ಕಾರವಿದ್ದರೂ ಇಷ್ಟು ದೊಡ್ಡ ಮೊತ್ತದ ಅವ್ಯವಹಾರ ಆರೋಪ ಕೇಳಿಬಂದಾಗ ತನಿಖೆಗೆ ಆದೇಶಿಸಲು ಮೀನಮೇಷ ಎಣಿಸುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಸಹಜವಾಗಿ ಕೇಳಿಬರುತ್ತಿವೆ. ಇದಕ್ಕೆ ಪ್ರಮುಖ ಕಾರಣ ರಾಜಕಾರಣ ಎನ್ನಲಾಗುತ್ತಿದೆ. ಮುಧೋಳ ಮೀಸಲು ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ ಮತಗಳೇ ನಿರ್ಣಾಯಕ. ರಾಮಣ್ಣ ತಳೇವಾಡ ಪ್ರಬಲ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದು, ಸಚಿವ ಗೋವಿಂದ ಕಾರಜೋಳ ಆಪ್ತ.ಕಾರಜೋಳ ಗೆಲುವಿನಲ್ಲಿ ರಾಮಣ್ಣ ತಳೇವಾಡ ಪ್ರಮುಖ ಪಾತ್ರವಹಿಸುತ್ತಾರೆ. ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ಮುಂದಾದರೆ ಗೋವಿಂದ ಕಾರಜೋಳ ಅವರಿಗೆ ಮುಂಬರುವ ಚುನಾವಣೆಯಲ್ಲಿ ರೆಡ್ಡಿ ಸಮುದಾಯದವರು ತಿರುಗಿ ಬೀಳಬಹುದು ಎನ್ನುವ ಲೆಕ್ಕಾಚಾರದಿಂದ ಗೋವಿಂದ ಕಾರಜೋಳ ತನಿಖೆಗಾಗಿ ಸರ್ಕಾರದ ಮಟ್ಟದಲ್ಲಿ ಮುಂದಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನು ಕಾಂಗ್ರೆಸ್ ಮುಖಂಡರು ಕೂಡಾ ರಾಮಣ್ಣ ತಳೇವಾಡ ವಿರುದ್ಧ ತನಿಖೆಗೆ ಪ್ರಬಲವಾಗಿ ಹಕ್ಕೊತ್ತಾಯ ಮಂಡಿಸದೇ ಜಾರಿಕೊಳ್ಳುತ್ತಿರುವುದು ರಾಜಕಾರಣಕ್ಕೆ ಎನ್ನುವ ಗುಮಾನಿ ಕೇಳಿಬರುತ್ತಿದೆ. ಹಾಗಿದ್ದಲ್ಲಿ 250 ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿದ್ದಾಗ ಸರ್ಕಾರ ಸಚಿವರು ತನಿಖೆ ಮಾಡಿಸುತ್ತೇವೆ ಎಂದು ಯಾಕೆ ಹೇಳುತ್ತಿಲ್ಲ ಎನ್ನುವ ಚರ್ಚೆ ಕೂಡಾ ನಡೆದಿದೆ.

ರನ್ನ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸುವಂತೆ ಆಗ್ರಹಿಸಿ ಕಾರ್ಮಿಕರು ರೈತರು ಕಳೆದ 43ದಿನಗಳಿಂದಲೂ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಸಚಿವ ಗೋವಿಂದ ಕಾರಜೋಳ ಸರ್ಕಾರ ಮುಟ್ಟದ ಪ್ರಯತ್ನಿಸಿ ಆರ್ಥಿಕ ಸಂಕಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗೆ ಅನುದಾನ ತಂದು ಪುನಶ್ಚೇತನ ನೀಡಬೇಕಿದೆ. ಭ್ರಷ್ಟಾಚಾರದ ತನಿಖೆ ನಡೆಯಿಸಿ ಸತ್ಯಾಸತ್ಯತೆ ಜನರಿಗೆ ತಿಳಿಸಬೇಕಿದೆ. ಆದರೆ ಸಚಿವ ಗೋವಿಂದ ಕಾರಜೋಳ ಮಾತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಮಾತನಾಡುವೆ ಎಂದಿದ್ದಾರಷ್ಟೆ.

ಈ ವರ್ಷದ ಹಂಗಾಮಿನಿಂದ ಸಕ್ಕರೆ ಕಾರ್ಖಾನೆ ಆರಂಭಿಸುವುದು ಕಷ್ಟಸಾಧ್ಯವಿದ್ದು, ಇನ್ನೊಂದೆಡೆ ಖಾಸಗೀಕರಣಕ್ಕೆ ವಿರೋಧವಿದೆ. ಆದರೆ ಸರ್ಕಾರದಿಂದಲೇ ಅನುದಾನ ತರುವ ಮೂಲಕ ಸಕ್ಕರೆ ಕಾರ್ಖಾನೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಸರ್ಕಾರ ಹಾಗೂ ಬ್ಯಾಂಕ್ ನಿಂದ ನೆರವು ನೀಡಿ ಕಾರ್ಖಾನೆಗೆ ಪುನಶ್ಚೇತನ ನೀಡಬೇಕಿದೆ.

ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಳಿವು ಉಳಿವಿನ ಪ್ರಶ್ನೆ ಸಚಿವ ಗೋವಿಂದ ಕಾರಜೋಳ ಕೈಯಲ್ಲಿದೆ. ಆದರೆ ಅವರು ಇಚ್ಛಾಶಕ್ತಿ ತೋರದಿರುವುದಕ್ಕೆ ಕಾರಣ ಈ ಹಿಂದೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿರುವ ನೋವು.

ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಹಾಗೂ ಮುಧೋಳರ ಕಾಂಗ್ರೆಸ್ ಮುಖಂಡ ಸತೀಶ್ ಬಂಡಿವಡ್ಡರ ಸುದ್ದಿಗೋಷ್ಠಿಗೆ ಸೀಮಿತವಾಗಿ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಖುದ್ದು ಸಿಎಂಗೆ ಭೇಟಿಯಾಗಿ ನೆರವು ಕೇಳುತ್ತಿಲ್ಲ. ಹಿರಿಯ ಸಚಿವ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ತಮ್ಮ ಆಪ್ತರ ಭ್ರಷ್ಟಾಚಾರದಿಂದ ಸಕ್ಕರೆ ಕಾರ್ಖಾನೆ ದಿವಾಳಿಯಾಗಿದ್ದನ್ನು ಕಂಡು ಅಸಹಾಯಕರಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಏನೇ ಆಗಲಿ ಮುಧೋಳ ಭಾಗದಲ್ಲಿ ಹೆಚ್ಚಾಗಿ ಕಬ್ಬು ರೈತರು ಬೆಳೆಯುತ್ತಿದ್ದು ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆಗೆ ಸರ್ಕಾರ ಪುನಶ್ಚೇತನ ನೀಡಬೇಕಾಗಿದ್ದು, ಭ್ರಷ್ಟಾಚಾರ ತನಿಖೆ ನಡೆಸಿ, ವಾಸ್ತವತೆ ಜನರ ಮುಂದೆ ತೆರೆದಿಡಬೇಕಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button