ಬಾಗಲಕೋಟೆ

ನವನಗರದ ಸಂತ್ರಸ್ತರಿಗೆ ದುಪ್ಪಟ್ಟು ವಿದ್ಯುತ್ ಬಿಲ್ ಶಾಕ್

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮನೆ ಮಠ ಕಳೆದುಕೊಂಡುವರು ಇದೀಗ ಸರ್ಕಾರದಿಂದ ವಿತರಿಸಿರುವ ನಿವೇಶನದಲ್ಲಿ ಮನೆ ಕಟ್ಟಿಕೊಂಡ ವರಿಗೆ ದುಪ್ಪಟ್ಟು ವಿದ್ಯುತ್ ಬಿಲ್ ನಿಂದ ಶಾಕ್ ಗೊಳಗಾಗಿದ್ದಾರೆ.

ಬಾಗಲಕೋಟೆ ನವನಗರದ ಯುನಿಟ್-2 ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಬಾಗಲಕೋಟೆ ನಗರದ ಮುಳುಗಡೆ ಆಗುವ 519 ಮೀಟರ್ ನಿಂದ 523 ಮೀಟರ್ ವರೆಗಿನ ಸಂತ್ರಸ್ತರಿಗಾಗಿ ಸರ್ಕಾರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಸಾವಿರಾರು ಎಕರೆ ಪ್ರದೇಶದಲ್ಲಿ ಇಲ್ಲಿ ನೂರಾರು ಕೋಟಿ ರೂ. ಖರ್ಚು ಮಾಡಿ ನಿವೇಶನ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿಪಡಿಸಿದೆ. ಕಳೆದ ಎರಡು ವರ್ಷಗಳಿಂದ ನೂರಾರು ಸಂತ್ರಸ್ತರು ಇಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇನ್ನೂ ನೂರಾರು ಜನರು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿ ಇನ್ನು ವಿದ್ಯುತ್ ಸಂಪರ್ಕ ಶಾಶ್ವತವಾಗಿ ಕಲ್ಪಿಸುತ್ತಿಲ್ಲ. ಇದರಿಂದ ತಾತ್ಕಾಲಿಕವಾಗಿ ಸಂಪರ್ಕವನ್ನು ಹೆಸ್ಕಾಂನಿಂದ ಪಡೆದುಕೊಳ್ಳುತ್ತಿದ್ದಾರೆ. ವರ್ಷಗಳು ಕಳೆದರೂ ವಿದ್ಯುತ್ ಮೀಟರ್ ಇಲ್ಲದೇ ತಾತ್ಕಾಲಿಕ ಬಿಲ್ ನ ಹೊರೆಯಾಗಿದೆ ಸಾಮಾನ್ಯವಾಗಿ ಮನೆ ಬಳಿಕೆಗೆ ಪ್ರತಿ ಯುನಿಟ್ ಗೆ 4ರೂ. ಶುಲ್ಕ ಇದ್ದರೆ ಇಲ್ಲಿನ ನಿವಾಸಿಗಳು ಮಾತ್ರ ಪ್ರತಿ ಯುನಿಟ್ 12 ರೂ. ಅಧಿಕ ಶುಲ್ಕ ಕಟ್ಟಬೇಕಿದೆ. ಇದರಿಂದ ಪ್ರತಿ ತಿಂಗಳು ಎರಡು, ಮೂರು, ನಾಲ್ಕು ಸಾವಿರ ರೂ. ಕಟ್ಟಬೇಕಾಗಿದೆ. ಇದರಿಂದ ಸಾಲ, ಶೂಲ ಮಾಡಿ ಮನೆ ಕಟ್ಟಿಕೊಂಡವರಿಗೆ ಇದೀಗ ವಿದ್ಯುತ್ ಶಾಕ್ ದೊಡ್ಡ ಹೊಡೆತವನ್ನು ನೀಡುತ್ತಿದೆ. ಹೀಗಾಗಿ ಇಲ್ಲಿ ಯಾರೂ ಸಹ ಬಾಡಿಗೆ ಬರಲು ಮುಂದಾಗುತ್ತಿಲ್ಲ. ಬಾಡಿಗೆ ಇದ್ದವರು ಮನೆ ಖಾಲಿ ಮಾಡ್ತಿದ್ದಾರೆ ಎಂದು ಮಾಧವಿ ರಾಠೋಡ್ ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ(ಬಿಟಿಡಿಎ)ದಿಂದ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಕಾರ್ಯ ಕಳೆದ ಎಂಟು ವರ್ಷಗಳಿಂದ ನಡೆದಿದ್ದರೂ ಇನ್ನೂ ಸಂಪೂರ್ಣವಾಗಿ ವಿದ್ಯುತ್ ಸೌಕರ್ಯ ಒದಗಿಸಲಾಗಿಲ್ಲ. ಇತ್ತ ನಿವಾಸಿಗಳಿಗೆ ವಿದ್ಯುತ್ ಶುಲ್ಕ ಹೊರೆ ಹೆಚ್ಚಿದೆ. ಶಾಶ್ವತವಾಗಿ ಸಂಪರ್ಕ ನೀಡುವಂತೆ ಹೆಸ್ಕಾಂ ನವರಿಗೆ ಕೋರಿದರೆ ಅವರು ಬಿಟಿಡಿಎ ವತಿಯಿಂದ ನಮಗೆ ಇನ್ನೂ ಹಸ್ತಾಂತರಿಸಿಲ್ಲ. ಇದರಿಂದ ಮೀಟರ್ ಅಳವಡಿಸಿಲ್ಲ ಎನ್ನುವ ಉತ್ತರ ಕೊಡುತ್ತಿದ್ದಾರೆ. ಈ ಬಗ್ಗೆ ಬಿಟಿಡಿಎ ಅವರಿಗೆ ಕೇಳಿದರೆ ಸಬೂಬು ಹೇಳುತ್ತಲೇ ಬಂದಿದ್ದಾರೆ. ಇದೀಗ ಬಿಟಿಡಿಎ ಅಧ್ಯಕ್ಷರಾಗಿ ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಇದೆ. ಸದ್ಯ ಹಕ್ಕು ಪತ್ರಗಳ ವಿತರಣೆ ಭರದಿಂದ ನಡೆದಿದೆಯಾದರೂ ವಿದ್ಯುತ್ ಬಿಲ್ ಶುಲ್ಕ್ ಹೊರೆಯಾಗಿದೆ.

ಹಿಂದಿನ ಆಡಳಿತ ಮಂಡಳಿ ಆಮೆಗತಿಯಲ್ಲಿ ಕಾಮಗಾರಿ ಮಾಡಿದ್ದರಿಂದ ಸಮಸ್ಯೆ ಆಗಿದೆ. ಈಗ ನಮ್ಮ ಆಡಳಿತ ತ್ವರಿತವಾಗಿ ಕಾಮಗಾರಿ ಕೈಗೊಂಡಿದೆ. ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಶಾಸಕರು, ಸಂಬಂಧಪಟ್ಟವರ ಜೊತೆ ಚರ್ಚಿಸಿದ್ದಾರೆ. ಸದ್ಯ ಎಲ್ಲ ಕಾಮಗಾರಿ ಮುಕ್ತಾಯ ಆಗಿದೆ. ಹೆಸ್ಕಾಂ ಮತ್ತು ಬಿಟಿಡಿಎ ಅಧಿಕಾರಿ ಜಂಟಿಯಾಗಿ ಪರೀಕ್ಷೆ ಮಾಡಿದ್ದಾರೆ. ಒಂದೇರಡು ದಿನಗಳಲ್ಲಿ ಬೆಳಗಾವಿ ಹೆಸ್ಕಾಂ ಕಚೇರಿಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಅಲ್ಲಿಂದ ಆದೇಶ ಬರುತ್ತಿದ್ದಂತೆ ಮೀಟರ್ ಅಳವಡಿಸಲಾಗುತ್ತದೆ. ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ ಬಿಟಿಡಿಎ ಸದಸ್ಯ ಶಿವಾನಂದ ಟವಳಿ ಹೇಳುತ್ತಾರೆ.

ಒಟ್ಟಿನಲ್ಲಿ, ಯುನಿಟ್-2ರಲ್ಲಿ ವಾಸ ಇರುವ ಮುಳುಗಡೆ ಸಂತ್ರಸ್ತರು ವಿದ್ಯುತ್ ಶುಲ್ಕದ ಶಾಕ್ ನಿಂದ ತತ್ತರಿಸಿ ಹೋಗಿದ್ದಾರೆ. ಇನ್ನು ಇಲ್ಲಿ ಸಾವಿರಾರು ಜನರು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡಬೇಕಿದೆ. ಅಲ್ಲಿ ಈ ರೀತಿ ಸಮಸ್ಯೆ ಆಗುತ್ತಿದೆ ಎನ್ನುವುದು ಜನರು ಅಲ್ಲಿಗೆ ಸ್ಥಳಾಂತರ ಆಗಲು ಹಿಂದೇಟು ಹಾಕುವಂತಾಗಿದೆ. ಕೂಡಲೇ ಬಿಟಿಡಿಎ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಅಲ್ಲಿನ ಜನರಿಗೆ ವಿದ್ಯುತ್ ಶಾಕ್ ನಿಂದ ಮುಕ್ತಿ ದೊರಕಿಸಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button