ತಂಗಿಯ ಬಾಲ್ಯ ವಿವಾಹ ಪ್ರಶ್ನಿಸಿದಕ್ಕೆ ಅಣ್ಣನ ಮೇಲೆ ಹಲ್ಲೆ

ಮೈಸೂರು: ತಂಗಿಯ ಬಾಲ್ಯ ವಿವಾಹ ವಿರೋಧಿಸಿದ ವ್ಯಕ್ತಿಗೆ ಚಾಕು ಇರಿದು ಎಸ್ಕೇಪ್ ಆಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಮ್ಮರಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್ ಎಂಬುವವರಿಗೆ ಚಾಕು ಇರಿದ ಮಾದೇಶ್ ಅಲಿಯಾಸ್ ಮೆಣಸು ಎಂಬಾತ ಬಳಿಕ ನಾಪತ್ತೆಯಾಗಿದ್ದಾನೆ. ಒಂದೂವರೆ ತಿಂಗಳ ಹಿಂದೆ ಮಾದೇಶ ಗೌಪ್ಯವಾಗಿ ಅಪ್ರಾಪ್ತೆಯನ್ನ ವಿವಾಹವಾಗಿದ್ದ. ಅಪ್ರಾಪ್ತೆಯನ್ನ ಮದುವೆಯಾಗಿದ್ದಕ್ಕೆ ಮಾದೇಶನನ್ನ ನಾಗೇಶ್ ಪ್ರಶ್ನೆ ಮಾಡಿದ್ದಾರೆ.
ನನ್ನ ತಂಗಿ ಇನ್ನು ಅಪ್ರಾಪ್ತೆ. ಬಾಲ್ಯ ವಿವಾಹ ಅಪರಾಧ ಎಂದು ಮಾದೇಶ್‌ಗೆ ನಾಗೇಶ್ ಬುದ್ದಿ ಹೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಮಾದೇಶ್, ಅಲ್ಲೇ ಇದ್ದ ಚಾಕುವಿನಿಂದ ನಾಗೇಶ್ ಮೇಲೆ ಹಲ್ಲೆ ಮಾಡಿದ್ದಾನೆ.
ಚಾಕು ಇರಿತದಿಂದ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ನಾಗೇಶ್ರನ್ನ ಕುಟುಂಬಸ್ಥರು ನಂಜನಗೂಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




