ರಾಜಕೀಯ ಪ್ರೇರಿತವಾಗಿ ಶ್ರೀನಿವಾಸ ಬೆಳದಡಿಯವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ: ವಿಜಯ ಗುಂಟ್ರಾಳ

ಧಾರವಾಡ: ಹು-ಧಾ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 69 ರಿಂದ ಸ್ಪರ್ಧಿಸಿದ ಕಾಂಗ್ರೆಸ್ ಪರಾಜಿತ್ ಅಭ್ಯರ್ಥಿ ಪತಿ ಶ್ರೀನಿವಾಸ ಬೆಳದಡಿ ಅವರು ರಾಜಕೀಯ ಪ್ರೇರಿತವಾಗಿ ಕೊಲೆ ಮಾಡುವ ಉದ್ದೇಶದಿಂದಲೇ ನಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯರವರ ಕೈವಾಡವಿದೆ ಎಂದು AIMIM ಪಕ್ಷದ ಮುಖಂಡ ವಿಜಯ ಗುಂಟ್ರಾಳ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಪಾಲಿಕೆ ಚುನಾಚಣೆಯಲ್ಲಿ 69 ನೇ ವಾರ್ಡಿನಿಂದ ಎಐಎಂಐಎಂ ಪಕ್ಷದಿಂದ ನಮ್ಮ ಪತ್ನಿ ಲಕ್ಷ್ಮಿ ಅವರು ಸ್ಪರ್ಧೆ ಮಾಡಿ ಸೋತ್ತಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾವೇ ಕಾರಣವೆಂದು ಆರೋಪಿಸಿ ಅಭ್ಯರ್ಥಿಯ ಪತಿ ಶ್ರೀನಿವಾಸ ಬೆಳದಡಿ ಸೇರಿ ಹದಿನಾರು ಜನರು ನಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.
ಹಲ್ಲೆ ಪ್ರಕರಣದ ಕುರಿತು ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿ, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮಾಡಿಸಿ ಎಂಎಲ್ಸಿ ಮಾಡಿಸಿದ್ದೇವೆ. ಆದರೂ ಸಹಿತ ಪೋಲಿಸ್ ಇನ್ಸ್ಪೆಕ್ಟರ್ ಹಲ್ಲೆಕೋರರನ್ನು ಬಂಧಿಸದೇ ಆರೋಪಿಗಳಿಂದ ನಮ್ಮ ವಿರುದ್ದವೇ ಪ್ರತಿ ದೂರನ್ನು ತೆಗೆದುಕೊಂಡು, ಪರೋಕ್ಷವಾಗಿ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಇವರ ಹಿಂದೆ ಶಾಸಕರ ಕೈವಾಡ ಕಂಡು ಬರುತ್ತಿದೆ. ಕೂಡಲೇ ಪೋಲಿಸ್ ಆಯುಕ್ತರು 16 ಜನ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.




