ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ ಹಾಡಿಗೆ ತಹಶೀಲ್ದಾರ್ ಸಖತ್ ಸ್ಟೆಪ್: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರಾ..?

ದಾವಣಗೆರೆ: ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಡಿಜೆಗೆ ಸಂಪೂರ್ಣ ನಿಷೇಧ ಹೇರಿದೆ. ಇನ್ನು ರಾಜ್ಯ ಸರ್ಕಾರವೇ ಖಡಾಖಂಡಿತವಾಗಿ ಡಿಜೆ ಬಳಕೆ ಮಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದ್ರೂ ದಾವಣಗೆರೆಯಲ್ಲಿ ತಹಶೀಲ್ದಾರ್ ಅವರೇ ಡಿಜೆಗೆ ಸ್ಟೆಪ್ ಹಾಕಿರುವ ಘಟನೆ ನಡೆದಿದೆ.
ದಾವಣಗೆರೆ ತಹಶೀಲ್ದಾರ್ ಅವರಿಂದಲೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಆರೋಪ ಕೇಳಿ ಬಂದಿದ್ದು, ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಗಣೇಶ ಹಬ್ಬಕ್ಕೆ ಡಿಜೆ, ಮೆರವಣಿಗೆ ನಿರಾಕರಿಸಿದ ತಹಶೀಲ್ದಾರ್ ಗಿರೀಶ್ ಅವರೇ ನೃತ್ಯ ಮಾಡಿದ್ದಾರೆ. ಗಣಪತಿ ವಿಸರ್ಜನೆ ಹಿನ್ನೆಲೆ ಹಲವು ಮನೋರಂಜನಾ ಕಾರ್ಯಕ್ರಮಗಳಿಗೂ ನಿಷೇಧ ಹೇರಲಾಗಿದೆ.
“ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ” ಹಾಡಿಗೆ ತಹಶೀಲ್ದಾರ್ ಸಖತ್ ಸ್ಟೆಪ್ ಹಾಕಿದ್ದಾರೆ. ದಾವಣಗೆರೆ ತಾಲೂಕಿನ ತುರ್ಚಘಟ್ಟ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇಲ್ಲಿಗೆ ಆಗಮಿಸಿದ ಗಿರೀಶ್ ಅವರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಡ್ಯಾನ್ಸ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಭಿಕ್ಷೆ ಬೇಡುವವರು, ಯಾರು ಇಲ್ಲದ ಅನಾಥರು ಇರುವ ಈ ಕೇಂದ್ರದಲ್ಲಿ ತಹಶೀಲ್ದಾರ್ ಅವರೇ ಗಣೇಶ ಪ್ರತಿಷ್ಠಾಪಿಸಿದ್ದರು. ಜನರಿಗೆ ಡಿಜೆ ನಿರಾಕರಿಸಿ ಅವರಿಂದಲೇ ನಿಯಮ ಉಲ್ಲಂಘನೆಯಾಗಿದೆ. ನಿಯಮ ಪಾಲಿಸಬೇಕಾದವರಿಂದಲೇ ನಿಯಮ ಉಲ್ಲಂಘನೆ ಆಗಿದೆ ಎಂಬ ಆರೋಪವೂ ಕೇಳಿ ಬಂದಿದೆ.




