ಕರಾವಳಿಯಲ್ಲಿ ಮತ್ತೆ ಚಿಗುರಿದ ಪ್ರವಾಸೋದ್ಯಮ : ಕಡಲ ತೀರದಲ್ಲಿ ಪ್ರವಾಸಿಗರ ಹಿಂಡು

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಕೊರೊನಾ ನಿಯಮವನ್ನು ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಪ್ರಕಾರ ಜಿಲ್ಲೆಯ ಎಲ್ಲಾ ಧಾರ್ಮಿಕ ಚಟುವಟಿಕೆಗೆ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿನ ಚಟುವಟಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ಕರಾವಳಿ ಭಾಗದಲ್ಲಿ ಜಲ ಸಾಹಸ ಕ್ರೀಡೆಗೆ ಮೌಖಿಕ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ವೀಕೆಂಡ್ ಕಳೆಯಲು ಪ್ರವಾಸಿಗರು ಕರಾವಳಿಯತ್ತ ಮುಖ ಮಾಡಿದ್ದಾರೆ.
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಮುರ್ಡೇಶ್ವರದ ಕಡಲತೀರ, ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್, ಹೊನ್ನಾವರ ಕಾಸರಕೋಡಿನ ಇಕೋ ಬೀಚ್ ಕಡಲ ತೀರದಲ್ಲಿ ನಿತ್ಯವೂ ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಇನ್ನು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಮುರ್ಡೇಶ್ವರದ ಈಶ್ವರ ದೇವಸ್ಥಾನ, ಶಿರಸಿಯ ಮಾರಿಕಾಂಬಾ ದೇವಸ್ಥಾನ, ಇಡಗುಂಜಿಯ ಗಣಪತಿ ದೇವಸ್ಥಾನಗಳಿಗೆ ಭಕ್ತ ಸಾಗರ ಹರಿದು ಬಂದಿದೆ.
ಇನ್ನು ಯಲ್ಲಾಪುರ, ದಾಂಡೇಲಿ ಭಾಗಕ್ಕೂ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದ್ದು, ಕಳೆದ ಆರು ತಿಂಗಳಿಂದ ಸಂಪೂರ್ಣ ನೆಲ ಕಚ್ಚಿದ್ದ ಪ್ರವಾಸೋದ್ಯಮ ಅಲ್ಪ ಚೇತರಿಕೆ ಕಂಡಿದೆ.
ಇಂದು ಜಿಲ್ಲೆಯ ರೆಸಾರ್ಟ್ ಗಳು ಹಾಗೂ ವಸತಿ ಗೃಹಗಳು ಬಹುತೇಕ ಫುಲ್ ಆಗಿವೆ. ಜಲ ಸಾಹಸ ಕ್ರೀಡೆಗೂ ಜನ ಬರುತ್ತಿದ್ದು,ಅಲ್ಪ ಪ್ರಗತಿ ಕಂಡಿದೆ.




