ಮೃತಪಟ್ಟು ಹತ್ತು ದಿನ ಕಳೆದರೂ ಹೋಗದ ಆತ್ಮ ; ಬೌದ್ಧ ಸನ್ಯಾಸಿಯ ಮೃತದೇಹಕ್ಕೆ ನಿತ್ಯವೂ ಪೂಜೆ

ಕಾರವಾರ : ಹತ್ತು ದಿನಗಳ ಹಿಂದೆ ಮೃತಪಟ್ಟ ಬೌದ್ಧ ಸನ್ಯಾಸಿಯ ದೇಹದಿಂದ ಆತ್ಮ ಹೋಗಿಲ್ಲ ಎಂಬ ಕಾರಣಕ್ಕೆ ಕಳೆದ ಹತ್ತು ದಿನಗಳಿಂದ ಮೃತಪಟ್ಟ ಹಾಸಿಗೆ ಮೇಲೆಯೇ ಬೌದ್ಧ ಸನ್ಯಾಸಿಗೆ ಪೂಜೆ ಸಲ್ಲಿಸುತ್ತಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.
ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂ.1ರ ಶರ ಗಾದೆನ್ ಬೌದ್ಧಮಠದ ಹಿರಿಯ ಬೌದ್ಧ ಸನ್ಯಾಸಿ ಯೇಷಿ ಪುನತ್ಸೊ (90 ವರ್ಷ) ಸೆ.9 ರಂದು ನಿಧನರಾಗಿದ್ದಾರೆ. ಮಂಚದ ಮೇಲೆ ಮಲಗಿದಲ್ಲಿಯೇ ಸಾವನ್ನಪ್ಪಿರುವ ಯೇಷಿ ಪುನತ್ಸೊ ಅವರ ಮೃತದೇಹವನ್ನು ಹಿರಿಯ ಬೌದ್ಧ ಬಿಕ್ಕುಗಳು ಆಗಾಗ ಪರೀಕ್ಷಿಸುತ್ತಿದ್ದಾರೆ.
ಕೋಣೆಯಲ್ಲಿ ದೀಪಗಳನ್ನು ಹಚ್ಚಿ ಪ್ರಾರ್ಥಿಸುತ್ತಿದ್ದಾರೆ.ಕೋಣೆಯೊಳಗೆ ಹಿರಿಯ ಬಿಕ್ಕುಗಳು ಮಾತ್ರ ಒಳ ಹೋಗಿ ಆತ್ಮ ಹೋಗಿದೆಯೇ ? ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಟಿಬೇಟಿಯನ್ ಬೌದ್ಧ ಧರ್ಮದಲ್ಲಿ ಹಿರಿಯ ಸನ್ಯಾಸಿಗಳು ಮೃತಪಟ್ಟಾಗ ಆತ್ಮ ಹೋಗುವವರೆಗೂ ಅಂದರೆ ಮೃತದೇಹದ ಮೂಗು, ಬಾಯಿಯಿಂದ ದ್ರವ ಬರುವವರೆಗೂ ಇಲ್ಲವೇ ವಾಸನೆ ಬರುವವರೆಗೂ ದೇಹದಲ್ಲಿ ಆತ್ಮ ಇರುತ್ತದೆ ಎಂದು ನಂಬಲಾಗುತ್ತದೆ.
ಇದನ್ನು ಹಿರಿಯ ಬೌದ್ಧ ಸನ್ಯಾಸಿಗಳು ಪರೀಕ್ಷಿಸಿ ಖಚಿತ ಪಡಿಸುತ್ತಾರೆ. ಈ ಹಿಂದೆ ಇದೇ ಟಿಬೇಟಿಯನ್ ಕಾಲೋನಿಯಲ್ಲಿ ನಾಲ್ವರು ಬೌದ್ಧ ಸನ್ಯಾಸಿಗಳು ಮೃತಪಟ್ಟ ಬಳಿಕ ಇದೇ ರೀತಿ ಇಟ್ಟು ಪೂಜಿಸಲಾಗಿತ್ತು. ನಂತರ ವಾರ,ಹದಿನೈದು ದಿನಗಳ ಬಳಿಕ ವಾಸನೆ ಬಂದಾಗ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ.




