ಕ್ರಿಕೆಟ್ಮಹಿಳೆವಿಶೇಷ

18ರ ಬಾಲೆ ಶಿಫಾಲಿ ವರ್ಮ; ಟೀಮ್ ಇಂಡಿಯಾ ವುಮೆನ್ ಕ್ರಿಕೆಟ್​ನ ಅದ್ಭುತ ತಾರೆ..

ಈ ಬಾಲೆಯ ಹೆಸರು ಶಿಫಾಲಿ ವರ್ಮ. ವಯಸ್ಸು ಕೇವಲ 18. ಆದರೆ ಕ್ರಿಕೆಟ್ ಮಹಿಳಾ ಕ್ರಿಕೆಟ್​ನಲ್ಲಿ ಇಂದು ಅತಿ ದೊಡ್ಡ ಹೆಸರು. ಆಟದ ಮೈದಾನದಲ್ಲಿ ಆಡಲು ನಿಂತರೆ ಶಿಫಾಲಿ ಸಿಡಿಗುಂಡು. ಶಿಫಾಲಿ ಇಂದು ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿರುವ ಅತಿ ಕಿರಿಯ ಮಹಿಳಾ ಆಟಗಾರ್ತಿ.

ಕೇವಲ 15ನೇ ವಯಸ್ಸಿನಲ್ಲಿಯೇ ಭಾರತೀಯ ಕ್ರಿಕೆಟ್ ತಂಡವನ್ನು ಪ್ರವೇಶಸಿದ ಶಿಫಾಲಿ ಮಹಿಳಾ ಕ್ರಿಕೆಟರ್​ಗಳ ಮಟ್ಟಿಗೆ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಶಿಫಾಲಿಯನ್ನು ಬಿಟ್ಟರೆ ಅತಿ ಚಿಕ್ಕ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಆಡಿದ ಆಟಗಾರನೆಂದರೆ ಸಚಿನ್ ತೆಂಡೂಲ್ಕರ್. ಈ ಹೋಲಿಕೆಯ ಜೊತೆಗೆ ಮತ್ತೊಂದು ವಿಸ್ಮಯವೆಂದರೆ ಶಿಫಾಲಿ ಇಂಥದ್ದೊಂದು ಅದ್ಬುತ ಸಾಧನೆ ಮಾಡಲು ಪ್ರೇರಣೆ ಪಡೆದಿರುವುದೇ ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್​ನಿಂದ. ಸಚಿನ್ ಪಕ್ಕಾ ಅಭಿಮಾನಿಯಾಗಿರುವ ಶಿಫಾಲಿ ಜೀವನ ಹಾಗೂ ಆಟ ಎರಡೂ ಸಚಿನ್ ಪ್ರೇರಣೆಯಿಂದಲೇ ರೂಪುಗೊಂಡವು ಎಂದರೆ ತಪ್ಪಾಗಲಾರದು.

ಹರಿಯಾಣದ ಚಿಕ್ಕ ಹಳ್ಳಿಯೊಂದರಿಂದ ಬಂದಿರುವ ಶಿಫಾಲಿ ವರ್ಮ ಕ್ರಿಕೆಟ್ ರಂಗದಲ್ಲಿ ತನ್ನ ಛಾಪು ಮೂಡಿಸುವ ಮೊದಲು, ಇಲ್ಲಿಯವರೆಗೆ ನಡೆದು ಬಂದ ಹಾದಿಯೇ ಬಲು ರೋಚಕವಾದದ್ದು. ಭಾರತದಲ್ಲಿ ಕ್ರಿಕೆಟ್ ಎಂದರೆ ಎಲ್ಲರಿಗೂ ಪ್ರೀತಿಪಾತ್ರವಾದ ಆಟವಾದರೂ ಸಹ ಅದು ಪುರುಷರ ಕ್ರಿಕೆಟ್​ಗೆ ಮಾತ್ರ ಹೆಚ್ಚಿನ ಒಲವು ಎಂಬುದು ಸುಳ್ಳಲ್ಲ. ಮಹಿಳೆಯರ ಕ್ರಿಕೆಟ್​ಗಾಗಲಿ, ಕ್ರಿಕೆಟ್ ಆಟಗಾರ್ತಿಯರಿಗಾಗಲಿ ಪುರುಷರಿಗೆ ಸಿಕ್ಕಷ್ಟು ಪ್ರೋತ್ಸಾಹ ಸಿಕ್ಕಿಲ್ಲ, ಸಿಗುತ್ತಲೂ ಇಲ್ಲ. ಹೀಗೆ ಯಾವ ಪ್ರೋತ್ಸಾಹಕರ ವಾತಾವರಣವಿಲ್ಲದಿದ್ದರೂ ಕೇವಲ ಛಲದಿಂದ, ತನ್ನ ಪ್ರತಿಭೆಯಿಂದ ಶಿಫಾಲಿ ಇಂದು ಟೀಮ್ ಇಂಡಿಯಾ ವುಮೆನ್ಸ್ ಟೀಮ್​ಗೆ ಸೇರಿದ್ದಾರೆ.

ಹರ್ಯಾಣದ ಹಳ್ಳಿಯೊಂದರಿಂದ ಟೀಮ್ ಇಂಡಿಯಾ ಸೇರುವವರೆಗಿನ ಕಠಿಣ ದಾರಿಯನ್ನು, ತಾನು ಹೇಗೆ ಸವೆಸಿದೆ ಎಂಬುದನ್ನು ಶಿಫಾಲಿ ವರ್ಮ ಹೀಗೆ ಹೇಳುತ್ತಾಳೆ. ‘ಚಿಕ್ಕಂದಿನಿಂದಲೂ ನನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟವಿತ್ತು. ಆದರೆ ನನಗೆ ಮೊದಮೊದಲು ಹುಡುಗರ ಜೊತೆಗೆ ಆಡಲು ಬಿಡುತ್ತಿರಲಿಲ್ಲ. ಹುಡುಗರೂ ತಮ್ಮ ಜೊತೆಗೆ ನನ್ನನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ನೀನು ಹುಡುಗಿ, ನಿನಗೆ ಚೆಂಡಿನ ಏಟು ಬಿದ್ದರೆ ಏನು ಮಾಡುವುದು, ಅದಕ್ಕೆ ನೀನು ನಮ್ಮ ಜೊತೆ ಆಡುವುದು ಬೇಡ ಎಂದು ಹುಡುಗರು ಹೇಳುತ್ತಿದ್ದರು’ ಎಂದು ಹಳೆಯದನ್ನು ನೆನೆಸಿಕೊಂಡು ಶಿಫಾಲಿ ಹೇಳುತ್ತಾಳೆ.

ಆಗ ಒಂದು ಸಲ ಶಿಫಾಲಿ ಅಕಾಡೆಮಿಯೊಂದಕ್ಕೆ ಹೋಗಿದ್ದಾಗ ಅಲ್ಲಿ ಒಂದಿಬ್ಬರು ಹುಡುಗಿಯರು ಬಾಯ್​ಕಟ್ ಮಾಡಿಕೊಂಡಿದ್ದನ್ನು ನೋಡಿದಳು. ಆಗ ಅವಳಿಗೂ ನಾನೂ ಏಕೆ ಬಾಯ್​ಕಟ್ ಮಾಡಿಕೊಂಡು ಹುಡುಗರ ಜೊತೆಯಲ್ಲಿ ಆಡಬಾರದು ಎನಿಸಿತಂತೆ. ಆಗ ಅವಳು ಮರುದಿನವೇ ಬಾಯ್​ಕಟ್ ಮಾಡಿಸಿಕೊಂಡು ಪ್ಯಾಂಟ್ ಶರ್ಟ್​ ಧರಿಸಿ ಹುಡುಗರ ಜೊತೆಗೆ ಆಡಲು ಹೋದಳಂತೆ. ಆಗ ಜೊತೆಯಲ್ಲಿದ್ದ ಹುಡುಗರಿಗೆ ಇವಳು ಹುಡುಗಿಯೆಂಬುದೇ ತಿಳಿಯಲಿಲ್ಲವಂತೆ.

ಈಗಲೂ ಬಾಯ್​ಕಟ್​ನಲ್ಲೇ ಟೀಮ್ ಇಂಡಿಯಾದಲ್ಲಿ ಶಿಫಾಲಿ ಆಡುತ್ತಿದ್ದಾಳೆ. ಮೊದಲು ಕೇವಲ ಹುಡುಗರ ಜೊತೆಗೆ ಆಡಲು ಅದನ್ನೊಂದು ಸಾಧನವನ್ನಾಗಿ ಬಳಸಿದ್ದ ಶಿಫಾಲಿಗೆ ಈಗ ಬಾಯ್​ಕಟ್ ಮಾಮೂಲಿಯಾಗಿಬಿಟ್ಟಿದೆ. ಆದರೆ ಚಿಕ್ಕಂದಿನಲ್ಲಿ ಹುಡುಗಿಯಾಗಿದ್ದ ಕಾರಣಕ್ಕೆ ಕ್ರಿಕೆಟ್ ಆಡಲು ಹೋದಾಗ ಮನೆಯವರು, ನೆರೆಹೊರೆಯವರಿಂದ ಎಷ್ಟೇ ಟೀಕೆಗಳು ಬಂದರೂ ಶಿಫಾಲಿ ಅವುಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಆಟದತ್ತ ಗಮನಹರಿಸಿದ್ದಳು. ಹಾಗಾಗಿಯೇ ಅವಳು ತನ್ನ ಗುರಿಯನ್ನು ಮುಟ್ಟಲು ಸಾಧ್ಯವಾದದ್ದು.

ಶಿಫಾಲಿ ಶಾಲೆಯಲ್ಲಿದ್ದಾಗಲೇ ಕ್ರಿಕೆಟ್ ಅಕಾಡೆಮಿ ಸೇರಲು ಪ್ರಯತ್ನಿಸಿದ್ದಳು. ಆದರೆ ಮಹಿಳೆಯರ ಕ್ರಿಕೆಟ್ ಅಕಾಡೆಮಿ ಇಲ್ಲದ್ದರಿಂದ ಅವಳಿಗೆ ಹಿನ್ನಡೆಯಾಯಿತು. ನಂತರ ಶಾಲೆಯಲ್ಲಿ ಹುಡುಗಿಯೆಂಬ ಕಾರಣಕ್ಕೆ ನಿನಗೆ ಏಟು ತಗುಲಬಹುದು ಬೇಡ ಎಂದು ಅವಳನ್ನು ಕ್ರಿಕೆಟ್​ನಿಂದ ದೂರವಿರಿಸಲು ಪ್ರಯತ್ನಿಸಿದರಂತೆ. ಒಮ್ಮೆ ಶಿಫಾಲಿಯ ಸಹೋದರ ಹುಷಾರಿಲ್ಲದ ಕಾರಣ ಕ್ರಿಕೆಟ್ ತಂಡಕ್ಕೆ ಹೋಗಲಾಗಲಿಲ್ಲ. ಆಗ ಅವನ ಜಾಗಕ್ಕೆ ಬಾಯ್​ಕಟ್ ಮಾಡಿಕೊಂಡಿದ್ದ ಶಿಫಾಲಿ ಹೋಗಿ ಆಡಿದ್ದಳು. ಹೀಗೆ ಹಲವು ಬಾರಿ ಆಡಿದ ಶಿಫಾಲಿಗೆ ತನ್ನ ಮೇಲಿನ ನಂಬಿಕೆ ಹೆಚ್ಚಾಯಿತು.

ಶಾಲೆಗೆ ಹೋಗುವಾಗ ಬಡಕುಟುಂಬದಲ್ಲಿ ಹುಟ್ಟಿದ್ದ ಶಿಫಾಲಿಗೆ ಆರ್ಥಿಕವಾಗಿಯೂ ತೊಂದರೆಯಿತ್ತು. ಹಾಗಾಗಿ ಶಾಲೆಗೆ ಸೈಕಲ್ ಮೇಲೆ ಹೋಗಿ ಬರುತ್ತಿದ್ದ ಶಿಫಾಲಿ ಹತ್ತು ಹಲವು ರೀತಿಯ ತೊಂದರೆಗಳನ್ನು ಎದುರಿಸಿ ಇಂದು ಭಾರತೀಯ ಕ್ರಿಕೆಟ್​ನಲ್ಲಿ ಬೆಳಗುತ್ತಿರುವ ತಾರೆಯಾಗಿದ್ದಾಳೆ. ಮುಂದೊಂದು ದಿನ ಟೀಮ್ ಇಂಡಿಯಾ ಕ್ಯಾಪ್ಟನ್ ಆಗುವ ಕನಸು ಕಂಡಿರುವ ಶಿಫಾಲಿ ವರ್ಮಾ ಭಾರತೀಯ ತಂಡ ಪ್ರತಿಯೊಂದು ಪಂದ್ಯದಲ್ಲಿಯೂ ಗೆಲ್ಲಬೇಕು ಹಾಗೂ ಆ ಗೆಲುವಿನಲ್ಲಿ ತನ್ನ ಕಾಣಿಕೆಯಿರಬೇಕು ಎಂದು ಬಯಸುತ್ತಾಳೆ. ಶಿಫಾಲಿ ವರ್ಮ ಎಂಬ ಅದ್ಭುತ ಹುಡುಗಿಗೆ ಬೆಸ್ಟ್ ಆಫ್ ಲಕ್ ಹೇಳೋಣ ಅಲ್ಲವೆ..

ಓಂಪ್ರಕಾಶ್ ನಾಯಕ್, 24×7ಲೈವ್​ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button