ಅಂಕಣಗಳುಸಮಾಜ

ಸಹಿಷ್ಣತೆಯೆಡೆಗೆ ಉತ್ಸಾಹ ತೋರಿಸುತ್ತಲೇ ಧಾರ್ಮಿಕ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವ ಮನಃಸ್ಥಿತಿ

ಯಾವುದೇ ಧರ್ಮೀಯರನ್ನು ನಿಜವಾದ ಭಾರತೀಯ ಎಂದು ಪರಿಗಣಿಸುವುದನ್ನೇ ಭಾರತೀಯರಲ್ಲಿ ಹೆಚ್ಚಿನವರು ಒಪ್ಪುತ್ತಾರಾದರೂ, ಧರ್ಮ ಧರ್ಮಗಳ ನಡುವಿನ ಅಂತರವನ್ನು ಇವರು ನಿರಾಕರಿಸುವುದಿಲ್ಲ. ಕೆಲವು ಮೌಲ್ಯಗಳು ಮತ್ತು ಧಾರ್ಮಿಕ ನಂಬಿಕೆಗಳ ಪರಸ್ಪರ ಒಳಗೊಳ್ಳುವಿಕೆ ಇದ್ದಿರುವಾಗಲೂ, ಒಂದೇ ದೇಶದಲ್ಲಿ, ಒಂದೇ ಸಂವಿಧಾನದಡಿಯಲ್ಲಿ ವಾಸಿಸುತ್ತಿರುವಾಗಲೂ ಭಾರತದ ಪ್ರಮುಖ ಧಾರ್ಮಿಕ ಸಮುದಾಯಗಳ ನಡುವೆ ಅಂಥ ಸಾಮ್ಯತೆಯಿಲ್ಲ ಎಂಬ ವಿಚಾರವೇ ಮುನ್ನೆಲೆಗೆ ಬರುವುದು ಮತ್ತು ವಿಭಿನ್ನ ಧರ್ಮಗಳ ಜನರ ನಡುವೆ ವೈವಾಹಿಕ ಬೆಸುಗೆಯಂಥ ಬಾಂಧವ್ಯವನ್ನು ಒಪ್ಪದಿರುವುದು ಕೂಡ ಇಲ್ಲಿನ ವಾಸ್ತವ.

ಭಾರತದಲ್ಲಿ ಸುಮಾರು ಮೂರನೇ ಎರಡರಷ್ಟು ಹಿಂದೂಗಳು ನಿಜವಾದ ಭಾರತೀಯರೆಂದು ಪರಿಗಣಿಸಲು ಹಿಂದೂ ಆಗಿರುವುದು ಅತ್ಯಗತ್ಯ ಎಂದು ನಂಬುತ್ತಾರೆ. ಆದರೂ ಇದೇ ಗುಂಪಿನ ಶೇ. 65 ಮಂದಿ ಧಾರ್ಮಿಕ ವೈವಿಧ್ಯತೆಯು ಈ ದೇಶಕ್ಕೆ ಉಪಯುಕ್ತ ಎಂಬ ನಂಬಿಕೆಯನ್ನೂ ಇಟ್ಟುಕೊಂಡವರಾಗಿದ್ದಾರೆ. ಸಮೀಕ್ಷೆಯೊಂದು ಈ ವಿಚಾರವನ್ನು ದೃಢಪಡಿಸಿದೆ.

ರಾಷ್ಟ್ರೀಯ ಗುರುತು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತ ಭಾರತೀಯ ಗ್ರಹಿಕೆಗಳ ಕುರಿತು ಅಮೆರಿಕಾ ಮೂಲದ ಪ್ಯೂ ರಿಸರ್ಚ್ ಸೆಂಟರ್‌ನ ಇತ್ತೀಚಿನ ಸಮೀಕ್ಷೆಯಿಂದ ಇದು ಗೊತ್ತಾಗಿದೆ. ಸಮೀಕ್ಷೆಯ ಬಗ್ಗೆ Scroll ಸವಿವರವಾಗಿ ವರದಿ ಮಾಡಿದ್ದು, ಈ ಸಮೀಕ್ಷೆಯಲ್ಲಿನ ಗಮನಿಸಬೇಕಾದ ಒಂದು ಅಂಶವೆಂದರೆ, ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವೆಂಬುದು ಸಹಿಷ್ಣತೆ ಎಂಬರ್ಥವನ್ನು ಹೊಂದಿರುವ ಹಾಗೆಯೇ, ವಿಭಿನ್ನ ಧಾರ್ಮಿಕ ಸಮುದಾಯಗಳ ನಡುವಿನ ಕಂದಕವಿರುವುದನ್ನು ಒಪ್ಪಿಕೊಳ್ಳುವ ಅರ್ಥದ್ದೂ ಆಗಿದೆ.

ಸಮೀಕ್ಷಾ ವರದಿಯ ಪ್ರಕಾರ, ಒಂದು ರಾಷ್ಟ್ರವಾಗಿ ತಾವು ಯಾರೆಂಬುದರ ಕೇಂದ್ರ ಭಾಗವಾಗಿ ಭಾರತೀಯರು ಧಾರ್ಮಿಕ ಸಹಿಷ್ಣುತೆಯನ್ನು ಕಾಣುತ್ತಾರೆ. ಯಾವುದೇ ಧರ್ಮೀಯರನ್ನು ನಿಜವಾದ ಭಾರತೀಯ ಎಂದು ಪರಿಗಣಿಸುವುದನ್ನೇ ಹೆಚ್ಚಿನವರು ಒಪ್ಪುತ್ತಾರಾದರೂ, ಧರ್ಮ ಧರ್ಮಗಳ ನಡುವಿನ ಅಂತರವನ್ನು ಇವರು ನಿರಾಕರಿಸುವುದಿಲ್ಲ. ಕೆಲವು ಮೌಲ್ಯಗಳು ಮತ್ತು ಧಾರ್ಮಿಕ ನಂಬಿಕೆಗಳ ಪರಸ್ಪರ ಒಳಗೊಳ್ಳುವಿಕೆ ಇದ್ದಿರುವಾಗಲೂ, ಒಂದೇ ದೇಶದಲ್ಲಿ, ಒಂದೇ ಸಂವಿಧಾನದಡಿಯಲ್ಲಿ ವಾಸಿಸುತ್ತಿರುವಾಗಲೂ ಭಾರತದ ಪ್ರಮುಖ ಧಾರ್ಮಿಕ ಸಮುದಾಯಗಳ ನಡುವೆ ಅಂಥ ಸಾಮ್ಯತೆಯಿಲ್ಲ ಎಂಬ ವಿಚಾರವೇ ಮುನ್ನೆಲೆಗೆ ಬರುವುದು ಮತ್ತು ವಿಭಿನ್ನ ಧರ್ಮಗಳ ಜನರ ನಡುವೆ ವೈವಾಹಿಕ ಬೆಸುಗೆಯಂಥ ಬಾಂಧವ್ಯವನ್ನು ಒಪ್ಪದಿರುವುದು ಕೂಡ ಇಲ್ಲಿನ ವಾಸ್ತವ.

‘ಭಾರತದಲ್ಲಿ ಧರ್ಮ: ಸಹಿಷ್ಣತೆ ಮತ್ತು ಪ್ರತ್ಯೇಕತೆ’ ಎಂಬ ಹೆಸರಿನ ಈ ಸಮೀಕ್ಷೆಯಲ್ಲಿ, ದೇಶದ ಸಾರ್ವಜನಿಕ ಜೀವನದಲ್ಲಿ ಧರ್ಮದ ಪಾತ್ರವನ್ನು ಗ್ರಹಿಸಲು 2019ರ ನವೆಂಬರ್‌ನಿಂದ 2020ರ ಮಾರ್ಚ್​ವರೆಗೆ 29,999 ಭಾರತೀಯರನ್ನು ಪ್ರಶ್ನಿಸಲಾಯಿತು. ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಸಿಖ್ಖರಲ್ಲಿನ ವಯಸ್ಕರನ್ನು ಈ ಸಮೀಕ್ಷೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಭಾರತೀಯ ಜನಸಂಖ್ಯೆಯಲ್ಲಿನ ಆಯಾ ಧರ್ಮಗಳ ಪ್ರಾತಿನಿಧ್ಯಕ್ಕೆ ಅನುಗುಣವಾಗಿ ಪ್ರಶ್ನಿಸಬೇಕಾದವರ ಸಂಖ್ಯೆಯನ್ನು ನಿರ್ಧರಿಸಲಾಗಿತ್ತು.

ಧರ್ಮದ ಬಗೆಗಿನ ಗ್ರಹಿಕೆಗಳು ನಿಶ್ಚಯವಾಗುವಲ್ಲಿನ ಅಂಶಗಳಲ್ಲಿ ವಿರೋಧಾಭಾಸಗಳಿರುವುದನ್ನು ಕೂಡ ಈ ಸಮೀಕ್ಷೆ ಹೇಳುತ್ತದೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಎಲ್ಲ ಧರ್ಮಗಳ ಶೇ. 91ರಷ್ಟು ಜನರು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ಹೇಳಿದರೆ, ಶೇ. 65ರಷ್ಟು ಜನರು ಕೋಮು ಉದ್ವೇಗವು ಈ ದೇಶದ ಬಹು ದೊಡ್ಡ ಸಮಸ್ಯೆ ಎಂದು ಗುರುತಿಸಿದ್ದಾರೆ.

ಈ ಅಧ್ಯಯನದ ಪ್ರಕಾರ, ಹೆಚ್ಚಿನ ಹಿಂದೂಗಳು ತಮ್ಮ ಧಾರ್ಮಿಕ ಗುರುತು ಮತ್ತು ಭಾರತೀಯತೆ ಎರಡೂ ಪರಸ್ಪರ ಹೆಣೆದುಕೊಂಡವುಗಳೆಂಬಂತೆ ಭಾವಿಸುತ್ತಾರೆ. ನಿಜವಾದ ಭಾರತೀಯನಾಗಲು ಹಿಂದೂ ಆಗಿರುವುದು ಅತ್ಯಗತ್ಯ ಎಂದು ಹೇಳುವ ಶೇ. 64ರಷ್ಟು ಜನರ ಜೊತೆಗೇ, ಹಿಂದಿ ಮಾತನಾಡುವುದು ಭಾರತೀಯನಾಗಿರಲು ಅಗತ್ಯ ಎಂದು ಭಾವಿಸುವ ಶೇ. 59ರಷ್ಟು ಹಿಂದೂಗಳಿದ್ದಾರೆ.

ಇಂಥ ಅಭಿಪ್ರಾಯವನ್ನು ವ್ಯಕ್ತಪಡಿಸಿದವರು ಯಾರು? ಈ ಪ್ರಶ್ನೆಯೂ ಮುಖ್ಯವಾಗುತ್ತದೆ. ಮತ್ತು ಸಮೀಕ್ಷೆಯು ಅದನ್ನೂ ಗುರುತಿಸಿದೆ. ಇಂಥ ಅಭಿಪ್ರಾಯವುಳ್ಳವರು ಮತ್ತು ಅವರ ರಾಜಕೀಯ ಒಲವುಗಳ ನಡುವಿನ ಸಂಬಂಧವನ್ನು ಸಮೀಕ್ಷೆ ಉಲ್ಲೇಖಿಸಿದೆ. ಇವರೆಲ್ಲರೂ 2019ರ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದವರಾಗಿದ್ದಾರೆ. ಹಿಂದೂ ರಾಷ್ಟ್ರೀಯವಾದಿ ಪಕ್ಷವೆಂದು ಗ್ರಹಿಸಲ್ಪಟ್ಟಿರುವ ಬಿಜೆಪಿಯೆಂದರೆ, ತಮ್ಮ ಧಾರ್ಮಿಕ ಮತ್ತು ರಾಷ್ಟ್ರೀಯ ಗುರುತನ್ನು ಪರಸ್ಪರ ಒಂದೇ ಎಂದು ಭಾವಿಸುವ ಜನರಿಗೆ ಬಲು ಇಷ್ಟ.

ಆದರೂ, ದೇಶದಲ್ಲಿ ಧಾರ್ಮಿಕ ವೈವಿಧ್ಯತೆಯನ್ನು ಸಕಾರಾತ್ಮಕ ಭಾವನೆಯಿಂದ ಕಾಣುವ ಶೇ. 53ರಷ್ಟು ಜನರಿದ್ದಾರೆ. ವಿಶೇಷವಾಗಿ, ಹಿಂದೂ ಆಗುವುದು ಮತ್ತು ಭಾರತೀಯನಾಗಿರಲು ಹಿಂದಿಯಲ್ಲಿ ಮಾತನಾಡುವುದು ಮುಖ್ಯ ಎಂದು ಭಾವಿಸುವ ಹಿಂದೂಗಳು ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದವರೇ ಧಾರ್ಮಿಕ ವೈವಿಧ್ಯತೆಯ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದವರಾಗಿದ್ದಾರೆ. ಆದರೆ ಈ ಸಕಾರಾತ್ಮಕ ಭಾವವು, ಹಿಂದುತ್ವ ಮತ್ತು ಭಾರತೀಯತೆ ಒಂದೇ ಎಂದು ನೋಡುವ ಬಗೆಯಾಗಿದೆ.

ಹೀಗೆ ಅನೇಕ ಹಿಂದೂಗಳಿಗೆ, ಧಾರ್ಮಿಕ ವೈವಿಧ್ಯತೆಯ ಬೆಲೆಕಟ್ಟುವುದು ಮತ್ತು ಹಿಂದೂಗಳೇ ಇತರ ಧರ್ಮೀಯರಿಗಿಂತ ಹೆಚ್ಚು ಅಧಿಕೃತವಾಗಿ ಭಾರತೀಯರು ಎಂದು ಭಾವಿಸುವುದು ವಿರೋಧಾಭಾಸವಾಗಿ ಕಾಣಿಸುವುದಿಲ್ಲ ಎಂಬುದನ್ನು ಈ ಅಧ್ಯಯನವು ನಿರೂಪಿಸುತ್ತದೆ.

ಎಲ್ಲ ಧರ್ಮಗಳ ಸುಮಾರು ಶೇ.84ರಷ್ಟು ಭಾರತೀಯರಿಗೆ ಅವರವರ ಧರ್ಮವೇ ಬಹಳ ಮುಖ್ಯ. ಎಂದು ಅಧ್ಯಯನವು ತೋರಿಸಿದೆ. ಎಲ್ಲ ಧರ್ಮೀಯರ ಬಗೆಗಿನ ಗೌರವ ಮತ್ತು ಸಹಿಷ್ಣತೆ ಭಾರತೀಯನಾಗಿರುವುದರ ಪ್ರಮುಖ ಭಾಗ ಎಂದೂ ಅದೇ ಪ್ರತಿಶತ ಜನರು ಅಭಿಪ್ರಾಯಪಡುವುದನ್ನು ಈ ಅಧ್ಯಯನ ತೋರಿಸಿದೆ.

ಹೀಗಿದ್ದೂ, ಈ ಸಮೀಕ್ಷೆಯಲ್ಲಿ ಪ್ರಮುಖ ಭಾಗಿಗಳಾದ ಹಿಂದೂಗಳು ಮತ್ತು ಮುಸ್ಲಿಮರು ತಾವು ಪರಸ್ಪರ ಬೇರೆ ಬೇರೆ ಎಂಬುದನ್ನೇ ಹೇಳುವವರಾಗಿದ್ದಾರೆ. ಶೇ. 66ರಷ್ಟು ಹಿಂದೂಗಳು ಮತ್ತು ಶೇ. 64ರಷ್ಟು ಮುಸ್ಲಿಮರು ತಾವು ಪರಸ್ಪರ ಭಿನ್ನ ಎಂಬ ಭಾವನೆ ಹೊಂದಿದವರಾಗಿದ್ದಾರೆ.

ಸಮೀಕ್ಷೆಯಲ್ಲಿ ಉತ್ತರಿಸಿದ ಹೆಚ್ಚಿನವರು ತಮ್ಮ ಸಮುದಾಯದ ಜನರು ಇತರ ಧಾರ್ಮಿಕ ಗುಂಪುಗಳಲ್ಲಿ ಮದುವೆಯಾಗುವುದನ್ನು ತಡೆಯುವುದು ಬಹಳ ಮುಖ್ಯ ಎಂದು ಹೇಳುತ್ತಾರೆಂಬುದನ್ನು ಸಮೀಕ್ಷೆಯು ಉಲ್ಲೇಖಿಸುತ್ತದೆ. ಸುಮಾರು ಶೇ. 66ರಷ್ಟು ಹಿಂದೂಗಳು ಮತ್ತು ಶೇ. 80ರಷ್ಟು ಮುಸ್ಲಿಮರು ತಮ್ಮ ಧರ್ಮದ ಮಹಿಳೆಯರು ಇತರರೊಂದಿಗೆ ಮದುವೆಯಾಗುವುದನ್ನು ತಡೆಯಲು ಬಯಸುವುದಾಗಿ ಹೇಳಿದ್ದಾರೆ. ಶೇ. 36ರಷ್ಟು ಹಿಂದೂಗಳು ತಮ್ಮ ನೆರೆಯವರನ್ನಾಗಿ ಮುಸ್ಲಿಂರನ್ನು ಹೊಂದಲು ಇಷ್ಟಪಡುವುದಿಲ್ಲ ಎಂಬುದೂ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಒಟ್ಟಾರೆಯಾಗಿ ಈ ಸಮೀಕ್ಷೆಯು ಸ್ಪಷ್ಟಪಡಿಸುವುದು ಏನೆಂದರೆ: ಧಾರ್ಮಿಕ ಸಹಿಷ್ಣತೆಯೆಡೆಗೆ ಉತ್ಸಾಹ ತೋರಿಸುತ್ತಲೇ ಧಾರ್ಮಿಕ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವ ಮನಃಸ್ಥಿತಿ ಭಾರತೀಯರದ್ದಾಗಿದೆ ಎಂಬುದು. ಭಾರತೀಯರ ಪರಿಕಲ್ಪನೆಯ ಪ್ರಕಾರ, ಧಾರ್ಮಿಕ ಸಹಿಷ್ಣತೆಯೆಂದರೆ ಎಲ್ಲ ಧರ್ಮಗಳು ಕೂಡುವುದಲ್ಲ. ವಿವಿಧ ಧರ್ಮಗಳ ವಿಲೀನತೆಗಿಂತಲೂ, ವಿವಿಧ ಸಮುದಾಯಗಳ ನಡುವೆ ಗೆರೆ ಕೊರೆದಿಟ್ಟಂತೆ ಕಾಣುವ ತೇಪೆ ಹಚ್ಚಿದ ಬಟ್ಟೆಯಂಥ ದೇಶವನ್ನು ಹೆಚ್ಚಿನ ಭಾರತೀಯರು ಬಯಸುತ್ತಾರೆ.

Spread the love

Related Articles

Leave a Reply

Your email address will not be published. Required fields are marked *

Back to top button