Latestಅಂಕಣಗಳುರಾಷ್ಟ್ರೀಯ

ದೆಹಲಿ ಗಲಭೆ: ಆರೋಪಿಗಳನ್ನು ರಕ್ಷಿಸಿದ್ದಕ್ಕಾಗಿ ಪೋಲಿಸರಿಗೆ ದಂಡ; ಪ್ರಭುತ್ವದ ಅಸ್ತ್ರವಾಗುತ್ತಿರುವುದಕ್ಕೆ ಕೋರ್ಟ್ ಕಳವಳ

ಎಂ ಹೈದರ್

ಪೋಲಿಸರು ಸರ್ಕಾರದ ಇಚ್ಛೆಯಂತೆ ಕೆಲಸ ಮಾಡುತ್ತಾರೆ ಮತ್ತು ಸಂದರ್ಭಕ್ಕೆ ತಕ್ಕಂತೆ ನಿರಪರಾಧಿಗಳನ್ನು ಅಪರಾಧಿಗಳನ್ನಾಗಿಯೂ ಅಪರಾಧಿಗಳನ್ನು ನಿರಪರಾಧಿಗಳನ್ನಾಗಿಯೂ ಮಾಡಬಲ್ಲರು ಎಂಬುದು ಅನುಮಾನ ಮಾತ್ರವಲ್ಲ, ಕಟು ವಾಸ್ತವ.

ಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಈಗ ಜಾತಿಯ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತುವವರಿಗೆ ಮನ್ನಣೆ ದೊರೆಯುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಇಂಥವರನ್ನು ಕೇವಲ ಯಾವುದೋ ಒಂದು ರಾಜಕೀಯ ಪಕ್ಷ ರಕ್ಷಣೆ ನೀಡಿ ಅವರಿಗೆ ಪದವಿಗಳನ್ನು ನೀಡುತ್ತಿದೆ ಎಂಬ ವಿಷಯವಲ್ಲ, ಸಮಾಜ ಕೂಡ ಅವರನ್ನು ಚುನಾವಣೆಗಳಲ್ಲಿ ಗೆಲ್ಲಿಸಿ ನಾಯಕರನ್ನಾಗಿ ಆರಿಸಿಕೊಳ್ಳುತ್ತದೆ ಎಂಬುದು ತಲ್ಲಣ ಉಂಟುಮಾಡುತ್ತದೆ.

ಪೋಲಿಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪಗಳು ದೇಶದಾದ್ಯಂತ ದಿನನಿತ್ಯ ಕೇಳಿಬರುತ್ತವೆ. ಆದರೆ ಅದೆಲ್ಲವೂ ಬಹುತೇಕವಾಗಿ ಜನರ ಅರಣ್ಯರೋದನವಾಗಿ ಮರೆತುಹೋಗುತ್ತದೆ. ಅದೇ ರೀತಿ ನಿರಪರಾಧಿಗಳನ್ನು ಪೋಲಿಸರು ಪ್ರಕರಣಗಳಲ್ಲಿ ಸಿಲುಕಿಸಿದ್ದಾರೆ ಎಂಬ ಆರೋಪಗಳು ಕೂಡ ದೇಶದಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ ಇದ್ಯಾವುದೂ ಈ ದೇಶದಲ್ಲಿ ಗಂಭೀರವಾದ ವಿಷಯಗಳಾಗುವುದಿಲ್ಲ, ಚರ್ಚೆಗಳಾಗುವುದಿಲ್ಲ.

ಕಳೆದ ವರ್ಷ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಅದಕ್ಕೆ ಪ್ರಚೋದನೆ ನೀಡಿದವರ ವಿಡಿಯೋ ಲಭ್ಯವಿದ್ದರೂ ಅವರುಗಳ ಮೇಲೆ ಯಾವುದೇ ಎಪ್ಐಆರ್ ದಾಖಲಾಗಿಲ್ಲ. ಬದಲಾಗಿ, ಅವರಿಗೆ ಪ್ರಭುತ್ವವು ಉತ್ತಮ ಹುದ್ದೆಯನ್ನು ದಯಪಾಲಿಸಿದೆ. ಈಗಿನ ಸೂಚನಾ ಮತ್ತು ಪ್ರಸಾರ ಮಂತ್ರಿಯಾಗಿರುವ ಅನುರಾಗ್ ಠಾಕೂರ್​ಗೆ ಯಾವ ಸಾಧನೆಗೆ ಮಂತ್ರಿ ಪದವಿ ನೀಡಲಾಯಿತು ಎಂಬುದನ್ನು ದೇಶ ಮತ್ತು ಜಗತ್ತು ಗಮನಿಸುತ್ತಿದೆ. ಅಂತೆಯೇ ಕಪಿಲ್ ಮಿಶ್ರಾ ಮತ್ತು ಪ್ರವೇಶ್ ಸಾಹೆಬ್ ಸಿಂಗ್ ದೆಹಲಿಯ ಗಲಭೆಗೆ ಯಾವ ರೀತಿಯಾಗಿ ತಮ್ಮ ಪಾತ್ರ ನಿಭಾಯಿಸಿದ್ದರು ಎಂಬುದಕ್ಕೆ ದಿವ್ಯದೃಷ್ಟಿಯೇನೂ ಬೇಕಿಲ್ಲ.

ಇಂತಹ ದುರಿತ ಕಾಲದಲ್ಲಿ, ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೋಲಿಸರು ರಕ್ಷಣೆ ಮಾಡುತ್ತಿದ್ದಾರೆ ಎಂದು ದೆಹಲಿಯ ಕಡ್ಕಡ್ ದೂಮಾ ನ್ಯಾಯಾಲಯವು ದೆಹಲಿಯ ಭಜನಾಪುರ ಠಾಣೆಯ ಪೋಲಿಸರಿಗೆ 25 ಸಾವಿರ ದಂಡ ವಿಧಿಸಿರುವುದು ಪೋಲಿಸರು ಪರಿಸ್ಥಿತಿಗೆ ಅನುಗುಣವಾಗಿ ಆರೋಪಿಗಳನ್ನು ಯಾವ ರೀತಿಯಾಗಿ ರಕ್ಷಿಸುತ್ತಾರೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

ಈಶಾನ್ಯ ದೆಹಲಿಯಲ್ಲಿ ಕಳೆದ ವರ್ಷ ನಡೆದ ಮತಿಯ ಹಿಂಸಾಚಾರದ ವೇಳೆ ತನ್ನ ಕಣ್ಣಿಗೆ ಗುಂಡೇಟಿನಿಂದ ಗಾಯಗಳಾಗಿದೆ, ಮತ್ತು ಈ ಕೃತ್ಯಕ್ಕೆ ಕಾರಣರಾದವರ ಮೇಲೆ ಪೋಲಿಸರು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಮೊಹಮ್ಮದ್ ನಾಸಿರ್ ಎಂಬ ದೆಹಲಿಯ ನಿವಾಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರಿನ ಆಧಾರದಲ್ಲಿ‌ ನ್ಯಾಯಾಲಯವು ದೆಹಲಿ ಪೊಲೀಸರಿಗೆ 24 ಗಂಟೆಗಳೊಳಗೆ ಎಫ್‍ಐಆರ್ ದಾಖಲಿಸುವಂತೆ ಅಕ್ಟೋಬರ್ 2020ರಲ್ಲಿ ಸೂಚಿಸಿತ್ತು. ಆದರೆ ದೆಹಲಿಯ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ದೆಹಲಿಯ ಪೋಲಿಸರು ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು. ದೆಹಲಿ ಪೊಲೀಸರ ಈ ಕ್ರಮವನ್ನು ಆಕ್ಷೇಪಿಸಿರುವ ನ್ಯಾಯಾಲಯ, ಪೊಲೀಸರು ಆರೋಪಿಗಳನ್ನು ರಕ್ಷಣೆ ಮಾಡಲು ಯತ್ನಿಸುತ್ತಿದ್ದಾರೆ ಹಾಗೂ ತಮ್ಮ ಶಾಸನಬದ್ಧ ಕರ್ತವ್ಯಗಳನ್ನುನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿ ಈ ಸಂಬಂಧ ಪೋಲಿಸರಿಗೆ 25 ಸಾವಿರ ದಂಡ ವಿಧಿಸಿರುವುದು, ಈ ಪ್ರಕರಣದಲ್ಲಿ ಪೋಲಿಸರ ಕರ್ತವ್ಯಪರತೆಯ ಮೇಲೆ ಗಂಭೀರ ಪ್ರಶ್ನೆ ಎದುರಾಗುವಂತೆ ಮಾಡಿದೆ.

ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್, ಈ ನಿರ್ದಿಷ್ಟ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಆದೇಶ ಮಾಡಿ ಪ್ರತ್ಯೇಕ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿರುವುದು, ಪೋಲಿಸರು ಆಳುವ ಸರ್ಕಾರಗಳ ಇಚ್ಛೆಯಂತೆ ಕೆಲಸ ಮಾಡುತ್ತಾರೆ ಮತ್ತು ಪ್ರಭುತ್ವ ಬಯಸಿದರೆ ಯಾರನ್ನು ಬೇಕಾದರೂ ಜೈಲಿಗೆ ಅಟ್ಟುತ್ತಾರೆ ಎಂಬುದಕ್ಕೆ ಪುಷ್ಟಿ ನೀಡುತ್ತಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಕೋಮುದ್ವೇಷದ ಜ್ವಾಲೆಗೆ ಸಿಲುಕಿ ಸುಮಾರು70 ಜನರು ಪ್ರಾಣ ಕಳೆದುಕೊಂಡಿದ್ದರು. 200 ಜನ ಗಾಯಗೊಂಡು ಹಲವು ಕುಟುಂಬಗಳು ನಿರಾಶ್ರಿತರಾಗಿದ್ದವು. ದೆಹಲಿಯ ಈ ಅಮಾನವೀಯ ಘಟನೆಯ ಬಗ್ಗೆ ಪೋಲಿಸರು ಗಲಭೆಗೆ ಪ್ರಚೋದನೆ ನೀಡಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಮುಖಂಡರಾದ ನತಾಶಾ ನರ್ವಾಲ್‌, ದೇವಾಂಗನಾ ಕಾಲಿತಾ ಹಾಗೂ ಆಸಿಫ್‌ ಇಕ್ಬಾಲ್‌ ತನ್ಹಾ ಅವರ ಮೇಲೆ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು.

ಆದರೆ ಈ ಪ್ರಕರಣದಲ್ಲಿ ನ್ಯಾಯಪೀಠವು ವಿದ್ಯಾರ್ಥಿಗಳ ಮೇಲಿನ ಆರೋಪಗಳು – ಯುಎಪಿಎಯ ಸೆಕ್ಷನ್ (15) ಭಯೋತ್ಪಾದಕ ಕಾಯ್ದೆ, ಭಯೋತ್ಪಾದಕ ಕೃತ್ಯಕ್ಕೆ ಹಣ ಸಂಗ್ರಹಿಸಿರುವುದು ಮತ್ತು (18) ಪಿತೂರಿ ಇವುಗಳು ಸಾಬೀತಾಗಿಲ್ಲ ಎಂದು ಹಾಗೂ ಪ್ರತಿಭಟನೆ ನಡೆಸಲು ಸಾಂವಿಧಾನಿಕವಾಗಿ ಖಾತರಿಪಡಿಸಿದ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ರೇಖೆಯು ಸ್ವಲ್ಪ ಮಸುಕಾಗಿರುವಂತೆ ತೋರುತ್ತಿದೆ ಎಂದು ಅಭಿಪ್ರಾಯಪಟ್ಟು ನ್ಯಾಯಾಲಯವು ಈ ಮೂವರು ವಿದ್ಯಾರ್ಥಿಗಳಿಗೆ ಜಾಮೀನು ನೀಡಿತ್ತು.

ಈ ಎಲ್ಲ ವಿಷಯಗಳನ್ನು ಅವಲೋಕಿಸಿದಾಗ ಪೋಲಿಸರು ಸರ್ಕಾರದ ಇಚ್ಛೆಯಂತೆ ಕೆಲಸ ಮಾಡುತ್ತಾರೆ ಮತ್ತು ಸಂದರ್ಭಕ್ಕೆ ತಕ್ಕಂತೆ ನಿರಪರಾಧಿಗಳನ್ನು ಅಪರಾಧಿಗಳನ್ನಾಗಿಯೂ ಅಪರಾಧಿಗಳನ್ನು ನಿರಪರಾಧಿಗಳನ್ನಾಗಿಯೂ ಮಾಡಬಲ್ಲರು ಎಂಬ ಜನರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button