ಟೋಕಿಯೋ ಒಲಿಂಪಿಕ್ಸ್ : ಬೆಳ್ಳಿಯ ಆರಂಭಕ್ಕೆ ಚಿನ್ನದ ವಿರಾಮ

ಸೋಮಶೇಖರ್ ಪಡುಕರೆ
ಸಂಭ್ರಮ, ಸಡಗರ, ಹತಾಶೆ, ನೋವು, ನಲಿವು, ಇತಿಹಾಸ, ಕಣ್ಣೀರು ಮತ್ತೆ ಆನಂದ ಭಾಷ್ಪ..ಹೀಗೆ ಜಾಗತಿಕ ಕ್ರೀಡಾಕೂಟ ಟೋಕಿಯೋ ಒಲಿಂಪಿಕ್ಸ್ ತೆರೆ ಕಂಡಿದೆ. ಆದರೆ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಗಳಿಸಿದ ಚಿನ್ನದ ಪದಕ ಭಾರತದಲ್ಲಿ ಒಲಿಂಪಿಕ್ಸ್ ನ ಹೊಸ ಅಧ್ಯಾಯದ ಆರಂಭಕೆ ದಾರಿ ಮಾಡಿಕೊಟ್ಟಿದೆ.
ಮೊದಲ ದಿನಲ್ಲಿ ಮೀರಾಬಾಯಿ ಚಾನು ಬೆಳ್ಳಿಯ ಪದಕ ಗೆದ್ದು ಶುಭಾರಂಭ ನೀಡಿದರೆ ಕೊನೆಯ ದಿನದಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದು ಭಾರತದ ಸ್ಪರ್ಧಿಗಳು ಸಂಭ್ರಮದಲ್ಲಿ ಮನೆ ಸೇರುವಂತೆ ಮಾಡಿದರು, ಮಾತ್ರವಲ್ಲ ಭಾರತೀಯರೆಲ್ಲರೂ ಆಗಸ್ಟ್ 7ರ ದಿನವನ್ನು ಸದಾ ಸ್ಮರಿಸುವಂತೆ ಮಾಡಿದರು. ಏಕೆಂದರೆ ಭಾರತ ಇದುವರೆಗೂ ಒಲಿಂಪಿಕ್ಸ್ ನ ಅಥ್ಲೆಟಿಕ್ಸ್ ನಲ್ಲಿ ಪದಕ ಗೆದ್ದಿರಲಿಲ್ಲ.
ಈ ಬಾರಿ ಭಾರತ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಸೇರಿ ಒಟ್ಟು 7 ಪದಕಗಳನ್ನು ಗೆದ್ದಿದೆ, ಭಾರತ ಒಲಿಂಪಿಕ್ಸ್ ನಲ್ಲಿ ತೋರಿದ ಉತ್ತಮ ಸಾಧನೆ ಇದಾಗಿದೆ. ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಅತ್ಯಂತ ಆತ್ಮವಿಶ್ವಾಸದಿಂದ ಸ್ಪರ್ಧಿಸಲು ಈ ಪದಕಗಳು ಪ್ರೇರಣೆಯಾಗಲಿವೆ. ಕ್ರೀಡೆಯಲ್ಲಿ ಬದುಕನ್ನು ರೂಪಿಸಿಕೊಳ್ಳಲು ಹೆಜ್ಜೆ ಇಟ್ಟ ಸಹಸ್ರಾರು ಕ್ರೀಡಾಪಟುಗಳಿಗೆ ಈ ಪದಕಗಳು ಸ್ಫೂರ್ತಿಯಾಗಲಿವೆ.

ಭಾರತ ಈ ಬಾರಿ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಸ್ಪರ್ಧಿಗಳನ್ನು ಅಂದರೆ 124 ಸ್ಪರ್ಧಿಗಳು ಪಾಲಗೊಂಡಿದ್ದರು, ಅದರಲ್ಲಿ 70 ಪುರುಷರು ಮತ್ತು 54 ಮಹಿಳೆಯರು. ಸೋಲು ಗೆಲವು ಇವುಗಳ ನಡುವೆ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳು ಮತ್ತು ಕ್ರೀಡೆಗಳ ಸಂಖ್ಯೆಎ ಹೆಚ್ಚಾಗುತ್ತಿದೆ, ಅದರಲ್ಲೂ ಮಹಿಳೆಯರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇದು ಕ್ರೀಡೆಯಲ್ಲಿರುವ ಶಕ್ತಿ.
ನೀರಜ್ ಗೆದ್ದ ಚಿನ್ನದ ಜತೆಯಲ್ಲಿ ಮೊದಲ ಬಾರಿ ಸೆಮಿಫೈನಲ್ ತಲುಪಿ ವೀರಾವೇಶದಿಂದ ಹೋರಾಡಿ ನಾಲ್ಕನೇ ಸ್ಥಾನ ಪಡೆದ ಭಾರತ ವನಿತೆಯರ ಹಾಕಿ ತಂಡ, ಗಾಲ್ಫ್ ನಲ್ಲಿ ಉತ್ತಮ ಪೈಪೋಟಿ ನೀಡಿ ಕೊನೆಯ ದಿನದಲ್ಲಿ 1 ಅಂಕದಿಂದ ಪದಕ ವಂಚಿತರಾದ ಅದಿತಿ ಅಶೋಕ್ ಕೂಡ ಜಗತ್ತಿನ ಕ್ರೀಡಾಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ 7 ನಕ್ಷತ್ರಗಳು:
ಮೀರಾಬಾಯಿ ಬೆಳ್ಳಿಯ ಆರಂಭ:
ಮಣಿಪುರದ ಇಂಪಾಲ ಜಿಲ್ಲೆಯ ಪರ್ವತ ತಪ್ಪಲಿನ ನಾನ್ಪೊಖ್ ಕಾಕ್ಚಿಂಗ್ ಗ್ರಾಮದಿಂದ ಮರಳು ತುಂಬಿದದ ಲಾರಿಗಳಲ್ಲಿ ಪ್ರಯಾಣಿಸಿ ತರಬೇತಿ ಪಡೆದ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್ ನಲ್ಲಿ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 202 ಕೆಜಿ ಭಾರವೆತ್ತಿ 21 ವರ್ಷಗಳ ನಂತರ ಭಾರತಕ್ಕೆ ವೇಟ್ ಲಿಫ್ಟಿಂಗ್ ನಲ್ಲಿ ಪದಕ ತಂದಿತ್ತರು. ಇದರೊಂದಿಗೆ ಭಾರತ ಮೊದಲ ದಿನವೇ ಬೆಳ್ಳಿಯೊಂದಿಗೆ ಖಾತೆ ತೆರೆಯಿತು.
ದಾಖಲೆ ಬರೆದ ಸಿಂಧೂ:

ಪಿ.ವಿ. ಸಿಂಧೂ ಬ್ಯಾಡ್ಮಿಂಟನ್ ನಲ್ಲಿ ಗಳಿಸಿದ ಕಂಚಿನ ಪದಕ ಭಾರತದ ಪಾಲಿಗೆ ದಾಖಲೆಯಾಯಿತು. ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರಲ್ಲದೆ, ಸುಶೀಲ್ ಕುಮಾರ್ ನಂತರ ಈ ಸಾಧನೆ ಮಾಡಿದ ಮೊದಲ ಸ್ಪರ್ಧಿ ಎನಿಸಿದರು. ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧೂ ಬೆಳ್ಳಿ ಪದಕ ಗೆದ್ದಿದ್ದರು.
ಪದಕ ಗೆದ್ದ ಮೂರನೇ ಬಾಕ್ಸರ್ ಲವ್ಲಿನಾ:
ಅಸ್ಸಾಂ ರಾಜ್ಯದ ಗೋಲಾಘಾಟ್ ಜಿಲ್ಲೆಯ ಬಾರ್ಪತಾರ್ ಗ್ರಾಮದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಒಲಿಂಪಿಕ್ಸ್ ಗೆ ಮೊದಲು ಸದ್ದು ಮಾಡಿರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ವಿಶ್ವದ ಶ್ರೇಷ್ಠ ಬಾಕ್ಸರ್ ಗಳ ವಿರುದ್ಧ ಜಯ ಗಳಿಸಿ 9 ವರ್ಷಗಳ ನಂತರ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು. ವಿಜೇಂದರ್ ಸಿಂಗ್ ಮತ್ತು ಮೇರಿ ಕೊಮ್ ನಂತರ ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಪದಕ ಗೆದ್ದ ಮೂರನೇ ಬಾಕ್ಸರ್ ಎನಿಸಿದರು.
ಬೆಳ್ಳಿ ಬೆಳಗಿದ ರವಿ ಕುಮಾರ್ ದಹಿಯಾ:
ಕುಸ್ತಿಯ ಕಣಜ ಸೋನೆಪತ್ ಸಂಜಾತ ರವಿ ಕುಮಾರ್ ದಹಿಯಾ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದ ಭಾರತದ ಏಳನೇ ಕ್ರೀಡಾಪಟು ಎನಿಸಿದರು. ರವಿ ಅವರ ತಂದೆ ಕಳೆದ 10 ವರ್ಷಗಳಿಂದ ಪ್ರತಿ ದಿನವೂ ಮಗನಿಗಾಗಿ ತನ್ನ ಹಳ್ಳಿಯಿಂದ ಹಾಲು ಮತ್ತು ಹಣ್ಣನ್ನು ತಂದು ಕ್ರೀಡಾಂಗಣದ ಹೊರಗಡೆ ಕಾಯುತ್ತಿದ್ದ ಆ ಶ್ರಮಕ್ಕೆ ಕೊನೆಗೂ ಬೆಲೆ ಸಿಕ್ಕಿದೆ.
ಇತಿಹಾಸ ಬರೆದ ಹಾಕಿ ಪುರುಷರ ಹಾಕಿ ತಂಡ:

ಭಾರತ ಹಾಕಿ ತಂಡ ಕ್ರೀಡಾಭಿಮಾನಿಗಳಿಂದ, ಫೆಡರೇಷನ್ ಗಳಿಂದ, ಮಾಜಿ ಆಟಗಾರರಿಂದ ಟೀಕೆಗೆ ಗುರಿಯಾದಷ್ಟು ಜಗತ್ತಿನಲ್ಲಿ ಬೇರೆ ಯಾವುದೇ ಕ್ರೀಡಾ ತಂಡ ಗುರಿಯಾಗಿಲ್ಲ. ಏಕೆಂದರೆ ಮೆಕ್ಸಿಕೋ ಒಲಿಂಪಿಕ್ಸ್ ವರೆಗೂ ನಾವು ತೋರಿದ ಸಾಧನೆ ಹಾಗಿತ್ತು. ಟರ್ಫ್ ಹಾಕಿ ಆರಂಭವಾದಾಗಿನಿಂದ ಒಲಿಂಪಿಕ್ಸ್ ನಲ್ಲಿ ನಮ್ಮ ಪ್ರದರ್ಶನ ನೀರಸವಾಗಿರುತ್ತಿತ್ತು. ಆದರೆ ಈ ಬಾರಿ ಪುರುಷ ಹಾಗೂ ಮಹಿಳಾ ಹಾಕಿ ತಂಡ ಹಿಂದಿನ ಸುವರ್ಣಯುಗವನ್ನು ನೆನಪಿಸುವಂತೆ ಪ್ರದರ್ಶನ ತೋರಿದರು. ಪುರುಷರು ಕಂಚು ಗೆದ್ದು ಇತಿಹಾಸ ನಿರ್ಮಿಸಿದರು, ವನಿತೆಯರು ನಾಲ್ಕನೇ ಸ್ಥಾನ ಗಳಿಸಿ ಹೃದಯ ಗೆದ್ದರು. ಭಾರತ ಹಾಕಿಯಲ್ಲಿ ದಾಖಲಾಗಿರುವ ಈ ಎರಡು ಸಾಧನೆ ಮುಂದಿನ ಚಾಂಪಿಯನ್ಷಿಪ್ ಗಳಿಗೆ ಪ್ರೇರಣೆಯಾಗಲಿದೆ.
ಕಂಚಿನ ಜೈ ಬಜರಂಗ್ ಪೂನಿಯಾ:
ವಿಶ್ವ ಚಾಂಪಿಯನ್ನರನ್ನು ಒಲಿಂಪಿಕ್ಸ್ ನಲ್ಲಿ ಸೋಲಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿ ಹಿಂದಿನ ಸೋಲಿನ ಕಹಿ ಮಾಸುವ ಮೋದಲೇ ಮತ್ತೊಂದು ಹೋರಾಟ ಎಂದಾಗ ಅಲ್ಲಿ ದೇಹ ಬಲದ ಜೊತೆಯಲ್ಲಿ ಮನೋಬಲವೂ ಸದೃಢವಾಗಿರಬೇಕಾಗುತ್ತದೆ. ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಕಜಕಿಸ್ತಾನದ ವಿಶ್ವಚಾಂಪಿಯನ್ ದೌಲತ್ ನಿಯಾಜ್ಬೆಕೋವ್ ವಿರುದ್ಧ ಜಯ ಗಳಿಸಿದ ಬಜರಂಗ್ ಟೋಕಿಯೋದಲ್ಲಿ ಮತ್ತೊಂದು ಪದಕ ತಂದಿತ್ತರು. ಲಂಡನ್ ಒಲಿಂಪಿಕ್ಸ್ ನ ಸಾಧನೆಯನ್ನು ಭಾರತದ ಸ್ಪರ್ಧಿಗಳು ಈ ಮೂಲಕ ಸರಿಗಟ್ಟಿದರು. ಭಾರತ ಲಂಡನ್ ನಲ್ಲಿ 6 ಪದಕ ಗೆದ್ದಿತ್ತು.
ಜಾವೆಲಿನ್ ನಲ್ಲಿ ಇತಿಹಾಸ ಬರೆದ ನೀರಜ್:
ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಗೆದ್ದ ಚಿನ್ನ ಭಾರತದ ಕ್ರೀಡೆಗೆ ಹೊಸ ರೂಪು ನೀಡಲಿರುವುದು ಸ್ಪಷ್ಟ, ಅಥ್ಲೆಟಿಕ್ಸ್ ನಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಪದಕ ತಂದುಕೊಟ್ಟ 23 ವರ್ಷದ ನೀರಜ್ ಚೋಪ್ರಾ ಭಾರತದ ಲಕ್ಷಾಂತರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ, 136 ಕೋಟಿ ಜನಸಂಖ್ಯೆಇರುವ ಭಾರತಕ್ಕೆ ಇದುವೆರೆಗೂ ಅಥ್ಲೆಟಿಕ್ಸ್ ನಲ್ಲಿ ಪದಕ ಗೆಲ್ಲಲಾಗಲಿಲ್ಲ. ಆದರೆ ವಿಶ್ವದಾಖಲೆ ಮೂಲಕ ಜೂನಿಯರ್ ವಿಶ್ವಚಾಂಪಿಯನ್ಷಿಪ್ ನಲ್ಲಿ ಚಿನ್ನಗೆದ್ದಿರುವ ನೀರಜ್ ಆ ದಿನವೇ ಒಲಿಂಪಿಕ್ಸ್ ಪದಕವನ್ನು ಗೆಲ್ಲುವ ಭರವಸೆ ಮೂಡಿಸಿದ್ದರು.
ಒಲಿಂಪಿಕ್ಸ್ ಕ್ರೀಡಾಕೂಟಗಳು ಪದಕಗಳ ಜತೆಯಲ್ಲಿ ಒಂದು ಸೌಹಾರ್ದತೆಯ ಸಂದೇಶವನ್ನು ಸಾರುತ್ತವೆ. ಎಲ್ಲ ವಿಭಾಗಗಳಲ್ಲೂ ಪದಕ ಗೆಲ್ಲಲು ಎಲ್ಲರಿಂದಲೂ ಸಾಧ್ಯವಿಲ್ಲ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಕಲಿಯಬೇಕಾದ ಪಾಠವಿದೆ. ನಾವು ಸಂಭ್ರಮದಲ್ಲಿ ಮೈ ಮರೆಯದೆ ಮತ್ತೊಂದು ಪದಕ ಗೆಲ್ಲುವವರನ್ನ ಬೆಳೆಸಬೇಕು. ಹಾಗಿದ್ದಲ್ಲಿ ಮಾತ್ರ ಪ್ಯಾರಿನಲ್ಲಿ ನಮ್ಮ ಪದಕಗಳ ಸಂಖ್ಯೆ ದ್ವಿಗುಣಗೊಳ್ಳಬಹುದು.
