
ಜಿ.ಮುಮ್ತಾಜ್ ಅಲೀಮ್
ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಜಿಲ್ಲೆ ಹಾವೇರಿಯಲ್ಲಿ ಮತ್ತೆ ಮುಗ್ಗರಿಸಿ ಬೀಳುವಂತಾಗಿದೆ. ರಾಜ್ಯದಲ್ಲಿ ಬದಲಾವಣೆಯ ದ್ಯೋತಕ್ಕೆ ಎಂಬಂತೆ ಗ್ರಾಮಪಂಚಾಯಿತಿಗಳಿಗೆ ಆಡಳಿತರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷವಾದ ಕಾಂಗ್ರೆಸ್ ಮೇಲುಗೈ ಸಾಧಿಸಿರುವುದು ಆ ಪಕ್ಷದ ನಾಯಕರು ಮತ್ತು ಮುಖಂಡರಲ್ಲಿ ಹುರುಪು ತುಂಬುವಂತಾಗಿದೆ.
ರಾಜ್ಯದಲ್ಲಿ 5 ನಗರಸಭೆಗಳು ಸೇರಿದಂತೆ 58 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 59 ಗ್ರಾಮ ಪಂಚಾಯಿತಿಗಳ 1,185 ಸ್ಥಾನಗಳಿಗೆ ನಾವಣೆ ನಡೆದಿತ್ತು. ಸ್ಥಳೀಯ ಸಂಸ್ಥೆಗಳ 9 ವಾರ್ಡ್ ಸೇರಿದಂತೆ ವಿವಿಧ ಗ್ರಾಮಪಂಚಾಯಿತಿಗಳ 401 ಸ್ಥಾನಗಳಿಗೂ ಉಪಚುನಾವಣೆ ನಡೆದಿತ್ತು.
ಸದ್ಯದ ಮಾಹಿತಿ ಪ್ರಕಾರ 1185 ಸ್ಥಾನಗಳ ಪೈಕಿ ಐನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. 430 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಇನ್ನು ಕೇವಲ 45 ಸ್ಥಾನಗಳನ್ನು ಪಡೆದಿರುವ ಜೆಡಿಎಸ್ ಮೂರನೇ ಸ್ಥಾನದಲ್ಲಿದೆ.
ಈ ಹಿಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಮತ್ತು ಬಿಜೆಪಿ ಎರಡೂ ಪಕ್ಷಗಳು ತಲಾ ಹನ್ನೊಂದು ಸ್ಥಾನಗಳನ್ನು ಗೆದ್ದಿದ್ದರೂ ಕೂಡ ಶೇಕಡಾವಾರು ಮತಗಳ ಪ್ರಮಾಣ ನಮಗೆ ಹೆಚ್ಚು ಬಂದಿದೆ. ನಮಗೆ 48% ಮತ ಬಂದಿದ್ದರೆ, ಬಿಜೆಪಿ ಗೆ 41% ಬಂದಿತ್ತು.
ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಕಾರ, ಈಗಿನ ಫಲಿತಾಂಶದಿಂದ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಇದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಭಾವಿಸಿರುವುದು ಕಾಣುತ್ತದೆ.
ಬಿಜೆಪಿಯ ಹಿರಿಯ ಧುರೀಣ ಬಿ.ಎಸ್.ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿತ್ತು. ಬೊಮ್ಮಾಯಿ ಅವರು ರಾಜ್ಯದ ಸಿಎಂ ಆದ ಮೇಲೆ ನಡೆದ ಹಾನಗಲ್, ಸಿಂಧಗಿ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ಹಿನ್ನಡೆ ಅನುಭವಿಸುವಂತಾಗಿದೆ.
ಸಿಎಂ ಬದಲಾವಣೆ ಖಚಿತವೇ ?
ಬೊಮ್ಮಾಯಿ ಸಿಎಂ ಆದ ನಂತರ ಆಗಿರುವ ಈ ಸರಣಿ ಸೋಲು ಅವರ ಮುಂದಿನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಏಕೆಂದರೆ ಮುಖ್ಯಮಂತ್ರಿಯಾದವರಿಗೆ ಎಷ್ಟೇ ಕ್ಲೀನ್ ಇಮೇಜ್ ಇದ್ದರೂ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ಯಾವುದೇ ಮುಖ್ಯಮಂತ್ರಿಗೆ ಸವಾಲಿನ ಕೆಲಸವಾಗಿರುತ್ತದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ಬೊಮ್ಮಾಯಿ ಮೇಲಿಂದ ಮೇಲೆ ವಿಫಲವಾಗುತ್ತಿದ್ದಾರೆ ಎಂಬುದಕ್ಕೆ ಇದುವರೆಗಿನ ಚುನಾವಣೆ ಫಲಿತಾಂಶಗಳೇ ಸಾಕ್ಷಿ.
ಯಡಿಯೂರಪ್ಪ ರಾಜಕೀಯ ದಾಳ
ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಚುನಾವಣೆ ಸವಾಲನ್ನು ಸಮರ್ಥವಾಗಿ ಎದುರಿಸಿದ್ದರು. ಹೆಚ್.ಡಿ.ಕುಮಾರಸ್ವಾಮಿ ಅವರ ನಂತರ ಅವರ ಉತ್ತರಾಧಿಕಾರಿಯಾಗಿ ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿ ಗಾದಿ ಅಲಂಕರಿಸಿದ ಯಡಿಯೂರಪ್ಪ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಯನ್ನು ಬೆಂಬಲಿಸಿ ಸರ್ಕಾರದ ರಚನೆಗೆ ಕಾರಣವಾಗಿದ್ದ 11 ಮಂದಿ ಬಾಂಬೆ ಬಾಯ್ಸ್ ಶಾಸಕರ ಪೈಕಿ ಹೆಚ್.ವಿಶ್ವನಾಥ್ ರನ್ನು ಹೊರತುಪಡಿಸಿ ಎಲ್ಲರನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದರು.
ಇದಕ್ಕೆ ಸೂಪರ್ ಸಿಎಂ ಎಂದೆನಿಸಿದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಶ್ರಮ ಗಮನಾರ್ಹವಾಗಿತ್ತು. ಯಡಿಯೂರಪ್ಪ ಹುಟ್ಟೂರು ಬೂಕನಕೆರೆ ಇರುವ ಕೆ.ಆರ್.ಪೇಟೆ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಜೆಡಿಎಸ್ ನಿಂದ ಬಿಜೆಪಿಗೆ ಬಂದು ಪಕ್ಷದ ಅಭ್ಯರ್ಥಿಯಾಗಿದ್ದ ಸಚಿವ ನಾರಾಯಣಗೌಡರನ್ನು ಗೆಲ್ಲಿಸಿದ್ದರು. ತದನಂತರ ಮಾಜಿ ಸಚಿವ ಸತ್ಯನಾರಾಯ ಅವರ ನಿಧನದಿಂದ ತೆರೆವಾದ ಶಿರಾ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲೂ ವಿಜಯೇಂದ್ರ ಪಾತ್ರ ಪ್ರಮುಖವಾಗಿತ್ತು.
ಆದರೆ ಸಿಎಂ ಗಾದಿಯಿಂದ ಯಡಿಯೂರಪ್ಪ ನಿರ್ಗಮನದ ನಂತರ ಅವರ ಶಿಷ್ಯಪಡೆಯವರೇ ಆದ ಬಸವರಾಜ ಬೊಮ್ಮಾಯಿ ಸಿಎಂ ಗಾದಿ ಅಲಂಕರಿಸಿದ್ದರು. ಮೆಲ್ನೋಟಕ್ಕೆ ಯಡಿಯೂರಪ್ಪ ಒಪ್ಪಿಗೆ ಪಡದೇ ಬೊಮ್ಮಾಯಿ ರನ್ನು ಸಿಎಂ ಗಾದಿ ಮೇಲೆ ಕೂರಿಸಿದ ಬಿಜೆಪಿ ವರಿಷ್ಠರು ತದನಂತರ ನಿಧಾನವಾಗಿ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರರನ್ನು ನಿಧಾನವಾಗಿ ನಿರ್ಲಕ್ಷಿಸತೊಡಗಿತು. ಒಳಗೆ ಅಸಮಾಧಾನವಿದ್ದರೂ ಬಹಿರಂಗವಾಗಿ ಅದನ್ನು ತೋರಿಸಿಕೊಳ್ಳದ ಯಡಿಯೂರಪ್ಪ ಅಂಡ್ ಸನ್ಸ್ ಒಳಗಿಂದೊಳಗೆ ರಾಜಕೀಯ ದಾಳ ಉರುಳಿಸತೊಡಗಿದರು.
ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಚುನಾವಣೆ ಪ್ರಚಾರ ಸಮಿತಿಯಲ್ಲಿ ಬಿಜೆಪಿ ಮೊದಲು ವಿಜಯೇಂದ್ರ ಹೆಸರನ್ನು ಸೇರಿಸಲಿಲ್ಲ. ಮಾಧ್ಯಮಗಳಲ್ಲಿ ಈ ವಿಷಯ ದೊಡ್ಡ ಸುದ್ದಿಯಾದ ಮೇಲೆ ಸಾವರಿಸಿಕೊಂಡ ಬಿಜೆಪಿ ಕೊನೆಗೆ ಪ್ರಚಾರ ಸಮಿತಿಯಲ್ಲಿ ವಿಜಯೇಂದ್ರ ಅವರಿಗೆ ಅವಕಾಶ ಕಲ್ಪಿಸಿತು. ಇತ್ತ ಯಡಿಯೂರಪ್ಪ ಮತ್ತು ಪುತ್ರ ಪ್ರಚಾರಕ್ಕೆ ಹೋದರೂ ನಿರ್ದಿಷ್ಠವಾಗಿ ಹಾನಗಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಬೆಂಬಲಿಗ ಪಡೆಗೆ ಅವರು ರವಾನಿಸಿದ ಸಂದೇಶವೇ ಬೇರೆ ಎಂಬುದು ಗುಟ್ಟಿನ ವಿಚಾರವೇನಲ್ಲ.
ಪರಿಣಾಮವಾಗಿ ಸಿಎಂ ಬೊಮ್ಮಾಯಿ ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಘಟಾನುಘಟಿ ನಾಯಕರಿದ್ದರೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯ ಸೋಲು ಅನುಭವಿಸಬೇಕಾಯಿತು. ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಮೊನ್ನೆ ನಡೆದ ಚುನಾವಣೆಯಲ್ಲೂ ಬಿಜೆಪಿ ಆಡಳಿತ ಪಕ್ಷವಾದರೂ ಎದುರಾಳಿ ಕಾಂಗ್ರೆಸ್ ಎದುರು ಹಿನ್ನೆಡೆ ಅನುಭವಿಸುವಂತಾಗಿದೆ.
ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಎದುರಾಳಿ ಕಾಂಗ್ರೆಸ್ ಎದುರು ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಸಹಜವಾಗಿ ಉಪಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸುತ್ತಾ ಮತಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಇದು ಬಿಜೆಪಿ ದಿಗಲಿಗೆ ಕಾರಣವಾಗಿದೆ.
ಮೂಲ ಬಿಜೆಪಿಗರ ತಳಮಳ
ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯಮಂತ್ರಿ ಬದಲಾವಣೆ ವಿಷಯ ಮತ್ತೆ ಮುಂಚೂಣಿಗೆ ಬರುವಂತಾಗಿದೆ. ಇದರ ಹಿಂದೆ ಮೂಲ ಕೆಲ ಬಿಜೆಪಿ ಮತ್ತು ಆರ್ ಎಸ್ ಎಸ್ ಮುಖಂಡರ ಒತ್ತಾಸೆಯೂ ಇದೆ. ಪಕ್ಷಕ್ಕೆ ಮೊನ್ನೆ ಮೊನ್ನೆ ಬಂದು ಸಿಎಂ ಆಗುವುದಾದರೆ ನಾವೇನು ಮಾಡಬೇಕು ಎಂಬುದು ಅವರ ತಳಮಳಕ್ಕೆ ಕಾರಣವಾಗಿದೆ. ನಿನ್ನೆ ಮತ್ತು ಮೊನ್ನೆ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮೂಲಕ ಈ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಮತ್ತು ಪಕ್ಷದ ಮುಖಂಡರಿಗೆ ವರಿಷ್ಠರು ನಿರ್ಬಂಧ ವಿಧಿಸಿದ್ದಾರೆ.
ಇದೇನೆ ಆದರು 2023ರ ಸಾರ್ವತ್ರಿಕ ಚುನಾವಣೆ ಸ್ಥಳೀಯ ಸಂಸ್ಥೆಗಳ ಪ್ರಸಕ್ತ ಫಲಿತಾಂಶದಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೆ ಮತ್ತೆ ಬಲ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.



