
ಎಂ ಹೈದರ್
ನಾವು ಯಾವುದೇ ರೀತಿಯ ಸಣ್ಣ ಪುಟ್ಟ ಸಾಲ ಪಡೆಯಲು ಬ್ಯಾಂಕ್ಗಳಿಗೆ ಹೋದರೆ ಅವರು ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ನಮ್ಮಲ್ಲಿನ ಎಲ್ಲಾ ರೀತಿಯ ದಾಖಲೆಗಳನ್ನು ಕೇಳುತ್ತಾರೆ. ಮರುಪಾವತಿಗೆ ಯಾವ ಮೂಲವಿದೆ, ಇದುವರೆಗೂ ಬ್ಯಾಂಕ್ ನಲ್ಲಿ ಯಾವ ರೀತಿ ವ್ಯವಹರಿಸಿದ್ದೀರಿ ಇತ್ಯಾದಿ ವಿಚಾರಗಳನ್ನು ಗಮನಿಸುತ್ತಾರೆ. ಬ್ಯಾಂಕುಗಳಲ್ಲಿ ಹಣವನ್ನು ಈಗಾಗಲೇ ಹೆಚ್ಚು ಹೆಚ್ಚು ವ್ಯವಹರಿಸಿದ್ದರೆ ಅದರ ಆಧಾರದಲ್ಲಿ ಸಾಲ ಕೊಡುವ ಬಗ್ಗೆ ಯೋಚಿಸುತ್ತಾರೆ.
ನಾವು ಬ್ಯಾಂಕ್ ಗಳಲ್ಲಿ ಯಾವುದೇ ರೀತಿಯ ವ್ಯವಹಾರಗಳನ್ನು ಮಾಡದೆ ಸ್ವಯಂ ಉದ್ಯೋಗ ಮಾಡಲು ಸಾಲಕ್ಕಾಗಿ ಬ್ಯಾಂಕ್ ಗೆ ಹೋದರೆ ಅವರು ಕನಿಷ್ಠ ಗೌರವವನ್ನು ಕೂಡ ಕೊಡಲಾರರು. ನಾವೆಷ್ಟೆ ಪ್ರಾಮಾಣಿಕ ಮನಸ್ಥಿತಿ ಹೊಂದಿದ್ದರೂ ಬ್ಯಾಂಕ್ ನಲ್ಲಿ ಅದು ವ್ಯರ್ಥ. ನಮ್ಮ ಮರುಪಾವತಿಯ ಸಾಮರ್ಥ್ಯವನ್ನು ಅಳೆದು ತೂಗಿ ನೋಡಿ, ನೂರೆಂಟು ಬಾರಿ ಅಲೆದಾಡಿಸಿ ನಮ್ಮ ಎಲ್ಲ ರೀತಿಯ ಭದ್ರತಾ ಪತ್ರಗಳ ದಾಖಲಾತಿ ಗಳನ್ನು ಪಡೆದ ಬಳಿಕವೂ ನಮ್ಮ ಸಾಲಕ್ಕೆ ಬ್ಯಾಂಕ್ ಗಳು ಮತ್ತೊಬ್ಬರ ಜಾಮೀನು ಪಡೆಯುತ್ತವೆ.
ಸಣ್ಣ ಪುಟ್ಟ ಸಾಲ ಪಡೆದವನು ಮರುಪಾವತಿಗೆ ವಿಳಂಬ ಮಾಡಿದಾಗ ಬ್ಯಾಂಕ್ ಗಳು ಯಾವ ರೀತಿ ಕಿರುಕುಳ ಕೊಡುತ್ತವೆ ಎಂಬುದನ್ನು ವಿವರಿಸಬೇಕಿಲ್ಲ. ಬಹಳಷ್ಟು ಜನರಿಗೆ ಇದರ ಅನುಭವ ಆಗಿರುತ್ತದೆ, ಇದರಿಂದ ಬೇಸತ್ತು ನೊಂದು ಆತ್ಮಹತ್ಯೆ ಹಾದಿ ಹಿಡಿಯುವ ಬಡ ಜೀವಗಳು ಅದೆಷ್ಟೊ.
ಆದರೆ ಕೋಟಿ ಕೋಟಿ ಲೆಕ್ಕದಲ್ಲಿ ಸಾಲ ಮಾಡಿ ವ್ಯವಸ್ಥಿತವಾಗಿ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ದೇಶ ಬಿಟ್ಟು ಓಡಿ ಹೋಗುವವರಿಗೆ ಇದೇ ಬ್ಯಾಂಕ್ ಗಳು ನೂರಾರು ಸಾವಿರಾರು ಕೋಟಿಗಳ ಸಾಲ ಎಷ್ಟು ಸುಲಭವಾಗಿ ಕೊಟ್ಟು ಮರು ಪಾವತಿಯಾಗದ ಸಾಲ ಎಂದು ಷರಾ ಬರೆದು ಬಿಡುತ್ತದೆ ಎಂದರೆ ಸಾಲಗಾರರು ನಿರುಮ್ಮಳವಾಗಿ ವಿದೇಶಕ್ಕೆ ಹಾರಿ ಐಷಾರಾಮಿ ಜೀವನ ನಡೆಸುತ್ತಾರೆ.
ಜನರ ತೆರಿಗೆ ಹಣವನ್ನು ರಾಜಾರೋಷವಾಗಿ ಲೂಟಿ ಮಾಡುವ ವ್ಯವಸ್ಥಿತ ತಂತ್ರದ ಭಾಗವಾಗಿ ಇವರೆಲ್ಲ ನಮ್ಮ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ಲೆಕ್ಕದಲ್ಲಿ ಸಾಲ ಮಾಡಿ ಯಾವುದೇ ಅಳುಕಿಲ್ಲದೆ ದೇಶ ತೊರೆಯುತ್ತಾರೆ ಇದಕ್ಕೆ ಆಯಕಟ್ಟಿನಲ್ಲಿರುವ ಅಧಿಕಾರಸ್ಥರ ಕೈವಾಡವು ಇರುತ್ತದೆ. ಇಲ್ಲಿನ ಆಡಳಿತ ವ್ಯವಸ್ಥೆ ಇವರಿಗೆ ಸಹಕರಿಸದೆ ಅವರು ಸಾಲ ಮಾಡಿ ದೇಶ ಬಿಟ್ಟು ಓಡಿಹೋಗಲು ಹೇಗೆ ಸಾಧ್ಯ?
ದೇಶದ ಅಭಿವೃದ್ಧಿಗೆ ಮಹತ್ತರ ಪಾತ್ರವನ್ನು ವಹಿಸಬೇಕಾಗಿರುವ ಬ್ಯಾಂಕ್ ಗಳು ಕೇವಲ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಲ ವಿತರಿಸುವ ಗವಾಕ್ಷಿಗಳಾಗಿ ಮಾತ್ರ ಕೆಲಸ ಮಾಡುತ್ತವೆ ಹೀಗೆ ಬ್ಯಾಂಕ್ ಗಳು ಕಾರ್ಪೊರೇಟ್ ಗಳಿಗೆ ಕೊಟ್ಟ ಸಾಲವನ್ನು ಸರ್ಕಾರ ಅದರ ಕೈಗೊಂಬೆಯಾಗಿ ಸಾವಿರಾರು ಕೋಟಿ ಮೊತ್ತದ ಸಾಲವನ್ನು ಯಾವುದೇ ಚಿಂತೆ ಇಲ್ಲದೆ ಮನ್ನಾ ಮಾಡಿ ಬಿಡುತ್ತದೆ ಹೀಗೆ ಸರ್ಕಾರವು ಮನ್ನಾ ಮಾಡಿದ ಹಣ ಈ ದೇಶದ ಬಹುಪಾಲು ಬಡ ಜನರು ಬೆವರು ಹರಿಸಿ ದಿನ ನಿತ್ಯ ತೆತ್ತ ತೆರಿಗೆಯ ಹಣ ಎಂಬ ಬಗ್ಗೆ ಸರ್ಕಾರ ಕಿಂಚಿತ್ತೂ ಚಿಂತೆ ಮಾಡುವುದಿಲ್ಲ.
ಬಡವರಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡಿ ಕಾರ್ಪೊರೇಟ್ ಕಂಪನಿಗಳಿಗೆ ಉದ್ದೇಶ ಪೂರ್ವಕವಾಗಿ ಸಾಲದ ರೂಪದಲ್ಲಿ ಕೊಟ್ಟು ಕೊನೆಗೆ ಮರುಪಾವತಿಯಾಗದ ಸಾಲ ಇಲ್ಲವೇ ದಿವಾಳಿ ಮತ್ತೊಂದು ಕತೆ ಎಣೆದು ಸಾಲದ ರೂಪದಲ್ಲಿ ಕೊಟ್ಟು ಅದನ್ನು ಮನ್ನಾ ಮಾಡುವ ಏಜೆಂಟ್ ಆಗಿ ಮಾತ್ರ ಸರ್ಕಾರ ಕೆಲಸ ಮಾಡುತ್ತದೆ ಎಂಬುದು ಕಟು ವಾಸ್ತವ.
ಕಾರ್ಪೊರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡಲು ಅವರಿಗೆ ಹಲವು ಅನುಕೂಲಕರ ನಿಯಮಗಳನ್ನು ಮಾಡಿಕೊಂಡಿರುವ ಸರ್ಕಾರ ಈ ದೇಶದ ಬೆನ್ನೆಲುಬಾದ ರೈತರಿಗೆ ಅವರ ಕಷ್ಟ ಕಾಲದಲ್ಲಿ ಸಾಲವನ್ನು ಮನ್ನಾ ಮಾಡುವ ಬಗೆಗೆ ಸಮರ್ಪಕವಾದ ನಿಯಮಗಳನ್ನೇ ಮಾಡಿಲ್ಲ ಎಂಬುದು ಸರ್ಕಾರಗಳಿಗೆ ರೈತರ ಮೇಲಿನ ಅಸಡ್ಡೆ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ.
ರಾಜಕೀಯ ಪಕ್ಷಗಳು ಕೇವಲ ಚುನಾವಣೆಗಳಲ್ಲಿ ಜನರಿಗೆ ಮಂಕು ಬೂದಿ ಎರಚಲು ರೈತರ ಸಾಲವನ್ನು ಮನ್ನಾ ಮಾಡುವ ಭರವಸೆ ನೀಡಿ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತವೆ. 2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಚುನಾವಣಾ ಭಾಷಣದಲ್ಲಿ ತಾನು ಅಧಿಕಾರಕ್ಕೇರಿದ ಮರುಗಳಿಗೆಯಲ್ಲಿ ಮೊದಲು ಮಾಡುವ ಕೆಲಸ ಈ ದೇಶದ ರೈತರ ಸಾಲ ಮನ್ನಾ ಮಾಡುವುದಾಗಿ ಮಾಡಿದ ಭಾಷಣ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಆದರೆ ಬಿಜೆಪಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಮೇಲೆ ಏನು ಮಾಡಿದೆ ರೈತರನ್ನು ಯಾವ ರೀತಿಯಾಗಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ಇಡೀ ದೇಶ ನೋಡುತ್ತಿದೆ.
ಕಾರ್ಪೊರೇಟ್ ಖದೀಮರು ಪ್ರತಿವರ್ಷ ಕಳೆದಂತೆ ಹೆಚ್ಚೆಚ್ಚು ಜನರು ಬ್ಯಾಂಕ್ ಗಳಲ್ಲಿ ಸಾಲ ಮಾಡಿ ದೇಶ ತೊರೆದವರ ಬಗ್ಗೆ ಸಾಮಾನ್ಯವಾಗಿ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಇವರುಗಳ ಹೆಸರು ಮಾತ್ರ ಜನರ ಮಧ್ಯೆ ಚಾಲ್ತಿಯಲ್ಲಿದೆ ಆದರೆ ಸರ್ಕಾರದ ಅಂಕಿ ಅಂಶದ ಪ್ರಕಾರವೇ ಹೇಳೋದಾದರೆ 2020 ರಲ್ಲಿ 70 ಜನ ಸಾಲ ಮಾಡಿ ದೇಶ ತೊರೆದರೆ 2021ರಲ್ಲಿ ಇವರ ಸಂಖ್ಯೆ 81, ಹೀಗೆ ಪ್ರತಿವರ್ಷವು ದೇಶ ಬಿಟ್ಟು ಓಡಿ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೇ ಈ ರೀತಿ ಸಾವಿರಾರು ಕೋಟಿ ಸಾಲ ಮಾಡಿ ದೇಶ ತೊರೆಯುವವರನ್ನು ತಡೆಯುವ ಸಣ್ಣ ಪ್ರಯತ್ನವನ್ನು ಕೂಡ ಸರ್ಕಾರ ಮಾಡುವುದಿಲ್ಲ. ಪೆಗಾಸಸ್ ಕಣ್ಗಾವಲು ಪಟ್ಟಿಯಲ್ಲಿಯೂ ಇಂಥ ಒಬ್ಬರ ಹೆಸರು ಕೂಡ ಇರಲಿಲ್ಲ.
ಅಂಕಿ ಅಂಶಗಳ ಪ್ರಕಾರ ಈಗಾಗಲೇ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದವರ ಸಂಖ್ಯೆ ಬರೋಬ್ಬರಿ 2,446. ಇದರಲ್ಲಿ ಗುಜರಾತಿನವರೇ ಹೆಚ್ಚು ಮತ್ತು ಇದರ ಒಟ್ಟು ಮೊತ್ತ ಐದು ಲಕ್ಷ ಕೋಟಿಗೂ ಅಧಿಕ. ಈ ಹಣ ಮತ್ತೆಂದೂ ವಾಪಸ್ಸು ಬರುವುದಿಲ್ಲ. ಹಣವಂತರು, ಅಧಿಕಾರಸ್ಥರು ಜೊತೆಯಾಗಿ ಮಾಡುವ ಈ ಕೃತ್ಯವು ಯಾವ ದೇಶದ್ರೋಹಕ್ಕೂ ಕಡಿಮೆಯೇನಲ್ಲ, ಅಲ್ಲವೇ?




