
ಜಿ. ಮುಮ್ತಾಜ್ ಅಲೀಮ್
ಉತ್ತರ ಪ್ರದೇಶ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಗರಿಗೆದರಲಾರಂಭಿಸಿವೆ. ಬಹುಜನ ಸಮಾಜವಾದಿ ಪಕ್ಷವೂ (ಬಿಎಸ್ ಪಿ ) ಬ್ರಾಹ್ಮಣರನ್ನು ಆಕರ್ಷಿಸುವ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಿದೆ. ಪಕ್ಷದ ನೇತಾರ ಸತೀಶ್ ಚಂದ್ರ ಮಿಶ್ರಾ ಅಯೋಧ್ಯೆ ಮೂಲಕ ಬ್ರಾಹ್ಮಣ ಶೈಲಿಯ ಪೂಜೆ-ಪುನಸ್ಕಾರಗಳ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ವಾಸ್ತವವಾಗಿ ಇದು ಬ್ರಾಹ್ಮಣ ಸಮ್ಮೇಳನ. ಆದರೆ ಇದಕ್ಕೆ ಪ್ರಭುತ್ವ ಗೋಷ್ಠಿ ಹೆಸರನ್ನು ನೀಡಲಾಯಿತು. ಇಂತಹ ಗೋಷ್ಠಿಗಳನ್ನು ಮಥುರಾ, ಕಾಶಿ, ಪ್ರಯಾಗ್ ರಾಜ್ ಮತ್ತಿತರ ಕಡೆಯೂ ಆಯೋಜಿಸಲು ಉದ್ದೇಶಿಸಲಾಗಿದೆ. ಬ್ರಾಹ್ಮಣರನ್ನು ಪಕ್ಷದೊಂದಿಗೆ ಜೋಡಿಸುವುದು, ಬ್ರಾಹ್ಮಣ ಮತದಾರರನ್ನು ಆಕರ್ಷಿಸುವುದು ಇದರ ಮುಖ್ಯಗುರಿ.
ಬಿಜೆಪಿಯೊಂದಿಗೆ ಬ್ರಾಹ್ಮಣರ ಮುನಿಸು
ಯುಪಿಯಲ್ಲಿ ಸರಿಸುಮಾರು 11ರಿಂದ 12ರಷ್ಟು ಬ್ರಾಹ್ಮಣ ಜನಸಮುದಾಯಕ್ಕೆ ಸೇರಿದ ಮತದಾರರಿದ್ದಾರೆ. ಬಿಜೆಪಿ ಇದು ತಮ್ಮ ಪಕ್ಷಕ್ಕೆ ಸೇರಿದ ಮತಗಳು ಎಂದು ಭಾವಿಸುತ್ತದೆ. ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷಕ್ಕೇ ಈ ಭಾವನೆ ಇತ್ತು. ಮೊದ ಮೊದಲು ಕಾಂಗ್ರೆಸ್ಸನ್ನು ಗೆಲ್ಲಿಸುತ್ತಿದ್ದ ಬ್ರಾಹ್ಮಣರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯತ್ತ ಜಾರಿದರು. ಪ್ರಸ್ತುತ ಬ್ರಾಹ್ಮಣರು ಸ್ವಲ್ಪಮಟ್ಟಿಗೆ ಬಿಜೆಪಿ ಬಗ್ಗೆ ಮುನಿಸಿಕೊಂಡಿರುವುದನ್ನು ಗಮನಿಸಬಹುದು. ಆದರೆ ಈ ಮುನಿಸನ್ನು ದೂರ ಮಾಡುವ ಪ್ರಯತ್ನಗಳೂ ಕೇಸರಿಪಡೆಯಿಂದ ನಡೆದಿವೆ.
ಬ್ರಾಹ್ಮಣರನ್ನು ಸೆಳೆಯಲು ತಂತ್ರ
ಇತ್ತ ಸಮಾಜವಾದಿ ಪಕ್ಷ ಪರಶುರಾಮನ ಮೂರ್ತಿಗಳ ಪ್ರತಿಷ್ಠಾಪನೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಬ್ರಾಹ್ಮಣರನ್ನು ಸೆಳೆಯುವ ಕಾರ್ಯಕ್ಕೆ ಕೈಹಾಕಿದೆ. ಬಿಎಸ್ ಪಿ ಕೂಡ ಬ್ರಾಹ್ಮಣ ಸಮ್ಮೇಳನಗಳ ಮೂಲಕ ಅಖಾಡಕ್ಕೆ ಇಳಿದಿದೆ. ಮತ್ತೊಂದೆಡೆ ಒಂದು ಕಾಲದಲ್ಲಿ ತನ್ನ ಜೋಳಿಗೆಯಲ್ಲಿದ್ದ ಬ್ರಾಹ್ಮಣ ಮತಗಳನ್ನು ಮತ್ತೆ ತನ್ನಡೆ ಸೆಳೆಯುವ ಪ್ರಯತ್ನಕ್ಕೆ ಅನುಗುಣವಾಗಿ ಕಾಂಗ್ರೆಸ್ ಕೂಡ ಬ್ರಾಹ್ಮಣರಿಗೆ ತೀವ್ರ ಮಹತ್ವ ನೀಡುವ ತಂತ್ರಕ್ಕೆ ಮೊರೆಹೋಗಿದೆ.
ಸೋಷಿಯಲ್ ಇಂಜಿನಿಯರಿಂಗ್ಗೆ ಮೊರೆ
ಒಟ್ಟಾರೆ, ಸೋಷಿಯಲ್ ಇಂಜಿನಿಯರಿಂಗ್ ಹೆಸರಿನಲ್ಲಿ ವಿಭಿನ್ನ ಜನಸಮುದಾಯದವರನ್ನು ಕ್ರೋಢೀಕರಿಸಿ ಜಾತಿ ಲೆಕ್ಕಾಚಾರದಲ್ಲಿ ರಾಜಕೀಯ ಲಾಭ ಪಡೆಯಲು ಪ್ರಮುಖ ರಾಜಕೀಯ ಪಕ್ಷಗಳು ಹವಣಿಸಿವೆ.
ಈ ನಿಟ್ಟಿನಲ್ಲಿ ಬಿಎಸ್ ಪಿ ಇದಕ್ಕೊಂದು ಆಂದೋಲನದ ರೂಪ ನೀಡಲು ಬಯಸಿದೆ. ಈ ಹಿಂದೆ ಬ್ರಾಹ್ಮಣ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪಕ್ಷ ನಡೆಸಿದ ಯಶಸ್ವಿ ಪ್ರಯೋಗ ಇದಕ್ಕೆ ಮುಖ್ಯ ಕಾರಣ. ಅದೇ ಪರಿಸ್ಥಿತಿ ಈಗಲೂ ಮುಂದುವರಿಯುವುದೇ ? ಈಗಲೂ ಅದು ಸಂಭವಿಸುವುದೇ ? ಎಂಬುದು ಚಿದಂಬರ ರಹಸ್ಯ.
ದಲಿತರ ಪಕ್ಷ ಎಂದೇ ಖ್ಯಾತಿಗಳಿಸಿದ ಬಿಎಸ್ ಪಿ ಬ್ರಾಹ್ಮಣರನ್ನು ತನ್ನತ್ತ ಸೆಳೆಯಲು ಮುಂದಾದಾಗ ಇಲ್ಲೇನೋ ನಡೆಯುತ್ತಿದೆ ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ. ದಲಿತರು ಮತ್ತು ಬ್ರಾಹ್ಮಣರು ಒಂದಾಗುವುದುಂಟೇ? ಎಂಬುದಕ್ಕೆ 2007ರ ಚುನಾವಣೆಯಲ್ಲಿ ಬಿಎಸ್ಪಿ ಈಗಾಗಲೇ ಉತ್ತರ ನೀಡಿಯಾಗಿದೆ. ಆದರೆ ಆಗಿನ ಪರಿಸ್ಥಿತಿಯೇ ಬೇರೆ, ಈಗಿನ ಸ್ಥಿತಿಯೇ ಬೇರೆ. ಆಗ ಬಿಜೆಪಿ ಅಷ್ಟೇನೂ ಪ್ರಬಲವಾಗಿರಲಿಲ್ಲ. ಈಗ ಪರಿಸ್ಥಿತಿ ಹಾಗೇನೂ ಇಲ್ಲ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಅಧಿಕಾರದಲ್ಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಗೆಲ್ಲಲು ಮೂರು ಜಾತಿಗಳ ಬೆಂಬಲ ಬೇಕೇ ಬೇಕು
ಯುಪಿ ಚುನಾವಣೆಯಲ್ಲಿ ಮುಖ್ಯವಾಗಿ ಮೂರು ಪ್ರಮುಖ ಜಾತಿಗಳ ಬೆಂಬಲ ಯಾರೂ ಪಡೆಯುತ್ತಾರೋ ಅವರು ಅಧಿಕಾರಕ್ಕೆ ಬರುತ್ತಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಸಮಾಜವಾದಿ ಪಕ್ಷವನ್ನು ಹಿಂದುಳಿದವರು ಅದರಲ್ಲೂ ಪ್ರಬಲ ಯಾದವರು, ಮುಸ್ಲಿಮರು ಬೆಂಬಲಿಸಿದರೆ, ಬಿಎಸ್ಪಿ, ದಲಿತರು ಮತ್ತು ಮುಸ್ಲಿಮರ ಬೆಂಬಲ ದಕ್ಕುತ್ತದೆ. ಆದರೆ, ಬ್ರಾಹ್ಮಣರ ಮತ ಪಡೆಯುವಲ್ಲಿ ಎರಡೂ ಪಕ್ಷಗಳು ಸೋಲುತ್ತಿದ್ದವು. ಕಾಂಗ್ರೆಸ್ ತನ್ನ ಉಚ್ರಾಯ ಕಾಲದಲ್ಲಿ ದಲಿತರು, ಮುಸ್ಲಿಮರು ಹಾಗೂ ಬ್ರಾಹ್ಮಣರ ಮತಗಳನ್ನು ಪಡೆದು ಸುಲುಭವಾಗಿ ಅಧಿಕಾರದ ಗಾದಿಗೇರುತಿತ್ತು. ನಿರ್ದಿಷ್ಠ ಪಕ್ಷವೊಂದಕ್ಕೆ ಗೆಲ್ಲುವ ವಾತಾವರಣ ನಿರ್ಮಾಣವಾದರೆ ಇತರೆ ಜಾತಿ ಜನಾಂಗದವರೂ ಅದರಿಂದ ಆಕರ್ಷಿತರಾಗಿ ಗೆಲ್ಲುವ ಪಕ್ಷಕ್ಕೆ ಮತ ಚಲಾಯಿಸುವುದು ಇಲ್ಲಿ ಗಮನಾರ್ಹ.
ಸಮಾಜವಾದಿ ಪಕ್ಷ ಮೊದಲು ಯುಪಿಯಲ್ಲಿ ಪ್ರಮುಖವಾಗಿ ಪ್ರಬಲ ಯಾದವ, ಕುರ್ಮಿ ಸಮುದಾಯದ ಮತಗಳ ಜತೆ ಮುಸ್ಲಿಮರ ಮತಗಳನ್ನು ನೆಚ್ಚಿಕೊಂಡಿತ್ತು. 2002ರಲ್ಲಿ ಅಮರ್ ಸಿಂಗ್ ಮೂಲಕ ಪ್ರಬಲ ರಜಪೂತ ಸಮುದಾಯದ ಮತಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಈ ಚುನಾವಣೆಯಲ್ಲಿ ಎಸ್ಪಿಗೆ 145 ರಷ್ಟು ಸ್ಥಾನಗಳು ದಕ್ಕಿದವು. 2012ರಲ್ಲಿ ಅದು ಪೂರ್ಣ ಬಹುಮತದೊಂದಿಗೆ ಅಧಿಕಾರವನ್ನು ಪಡೆಯಿತು.
ಈ ನಡುವೆ 2007ರಲ್ಲಿ ನಡೆದ ಮಾಯಾವತಿ ದಲಿತ ಮತ್ತು ಬ್ರಾಹ್ಮಣ ಕಾಂಬೀನೇಷನ್ ಪ್ರಯೋಗ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಬಿಎಸ್ಪಿಗೆ ಜಯ ತಂದುಕೊಟ್ಟಿತು. ಈ ಸಂದರ್ಭದಲ್ಲಿ ಬಿಎಸ್ಪಿಯ ‘ಆದ್ಮಿ ನಹಿ ಗಣೇಶ್ ಹೈ-ಪ್ರಭಾವ್ ಶಾಲಿ ಮಹೇಶ್ ಹೈ’ , ‘ಬ್ರಾಹ್ಮಣ್ ಸಂಘ್ ಬಜಾಯೇಗಾ- ಹಾತಿ ಬಡ್ತಾ ಜಾಯೇಗ’ ಮತ್ತಿತರ ಆಕರ್ಷಕ ಘೋಷಣೆಗಳು ಮನ ಸೆಳೆದವು.
ಇದಕ್ಕೂ ಮುನ್ನ 2003ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ರಜಪೂತ ಮುಖಂಡ ರಘುರಾಜ್ ಪ್ರತಾಪ್ ಸಿಂಗ್ ( ರಾಜಾಭಯ್ಯಾ) ವಿರುದ್ಧ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಯುಪಿ ರಾಜಕಾರಣದಲ್ಲಿ ಬ್ರಾಹ್ಮಣರು ಮತ್ತು ಠಾಕೂರರ ನಡುವೆ ಪರಂಪರಾನುಗತವಾಗಿ ಬೆಳೆದುಬಂದಿರುವ ರಾಜಕೀಯ ವೈಮನಸ್ಸು ಕುರಿತ ಚರ್ಚೆ ಮುನ್ನಲೆಗೆ ಬಂತು. ಪರಿಣಾಮವಾಗಿ ಬ್ರಾಹ್ಮಣರ ಮತಗಳು ಬಿಎಸ್ಪಿ ಪರವಾಲಿದವು.
ಇದಾದ ಮೇಲೆ ಸಮಾವಾದಿ ಪಕ್ಷ ಕೂಡ ಮಾಯಾವತಿ ಅವರ 2007ರ ಪ್ರಯೋಗವನ್ನೇ 2012ರಲ್ಲಿ ಅನುಸರಿಸಿ ಭಾಗಶಃ ಯಶಸ್ವಿಯಾಯಿತು. ಈ ಚುನಾವಣೆಯಲ್ಲಿ ಬುದ್ಧಿಜೀವಿ ಸಮ್ಮೇಳನಗಳ ಮೂಲಕ ಎಸ್ಪಿ ಬ್ರಾಹ್ಮಣರನ್ನು ಆಕರ್ಷಿಸಿತ್ತು.
ಹಾಗೆ ನೋಡಿದರೆ ಯುಪಿಯಲ್ಲಿ ಕಾಂಗ್ರೆಸ್ ಬುಟ್ಟಿಯಲ್ಲಿದ್ದ ಬ್ರಾಹ್ಮಣ ಮತಗಳು ಬಿಜೆಪಿ ಪರವಾಗಿ ವಾಲಲು ಪಕ್ಷ 90ರ ದಶಕದಲ್ಲಿ ನಡೆಸಿದ ರಾಮಮಂದಿರ ಆಂದೋಲನ ಪ್ರಮುಖ ಮಜಲಾಗಿ ಪರಿಣಮಿಸಿತ್ತು. 1996ರ ನಂತರ ಕಲ್ಯಾಣ್ ಸಿಂಗ್ ಸರ್ಕಾರ ಅನುಸರಿಸಿದ ನೀತಿಗಳ ಪರಿಣಾಮವಾಗಿ ಅವರ ವಿರುದ್ಧ ಬ್ರಾಹ್ಮಣರು ತಿರುಗಿಬೀಳಲಾರಂಭಿಸಿದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿವರೆಗೂ ದೂರು ಹೋಯಿತು. ಪರಿಣಾಮವಾಗಿ ಕಲ್ಯಾಣ್ ಸಿಂಗ್ ಅಧಿಕಾರ ಕಳೆದುಕೊಂಡು ರಜಪೂತ ರಾಜ್ ನಾಥ್ ಸಿಂಗ್ ಗಾದಿಗೇರಿದರು.
2017ರಲ್ಲಿ ಸಮಾಜವಾದಿ ಪಕ್ಷ ಆಡಳಿತ ವಿರೋಧಿ ಅಲೆಯಿಂದಾಗಿ ಸೋಲು ಅನುಭವಿಸಿತು. ಜತೆಗೆ ಪತನದಂಚಿನಲ್ಲಿದ್ದ ಕಾಂಗ್ರೆಸ್ ಸಹವಾಸ ಸಮಾಜವಾದಿ ಪಕ್ಷಕ್ಕೆ ಭಾರಿ ಬೆಲೆ ತೆರಯುವಂತೆ ಮಾಡಿತು. ಇದೇ ವೇಳೆ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅಲೆಯ ಲಾಭ, ಹಿಂದುತ್ವ, ರಾಮಮಂದಿರ ನಿರ್ಮಾಣ ಮತ್ತಿತರ ಸಾಂಪ್ರದಾಯಿಕ ವಿಚಾರಗಳನ್ನು ಮುಂದಿಟ್ಟು ಭಾವನಾತ್ಮಕವಾಗಿ ಬ್ರಾಹ್ಮಣ ಸಮುದಾಯವನ್ನು ಸೆಳೆಯಿತು. ಜತೆಗೆ ಯಾದವಯೇತರ ಹಿಂದುಳಿದ ಜಾತಿಗಳ ಮತಗಳನ್ನು ಕ್ರೋಢೀಕರಿಸಿ ತನ್ನ ಪರವಾಗಿಸಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿತು.
ಆದರೆ ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಬ್ರಾಹ್ಮಣರು ತಮ್ಮ ಪಾರಂಪರಿಕ ವಿರೋಧಿ ರಜಪೂತ ಸಮುದಾಯಕ್ಕೆ ಸೇರಿದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ನೀತಿಗಳಿಂದ ಮುನಿಸಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಯೋಗಿ ಸರ್ಕಾರದ ವಿರುದ್ಧ ವಿಪ್ರ ಸಮುದಾಯದ ಈ ಮುನಿಸು ತಾತ್ಕಾಲಿಕ. ಮನೆಯಲ್ಲಿ ಮಗು ಮುನಿಸಿಕೊಂಡಾಗ ಅದು ತೋರುವ ಕೋಪ-ತಾಪ, ಹಠಕ್ಕೆ ಸಮ ಅಂದರೆ ಬಿಜೆಪಿಯಿಂದ ಬ್ರಾಹ್ಮಣರು ಸಂಪೂರ್ಣವಾಗಿ ಹೊರಗಿ ಕಾಲಿಟ್ಟಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಬ್ರಾಹ್ಮಣರ ಮತಗಳನ್ನು ಸೆಳೆಯಲು ಬಿಎಸ್ಪಿ ಮತ್ತು ಎಸ್ಪಿ ಪರಸ್ಪರ ಪೈಪೋಟಿಗಿಳಿದಿರುವಂತೆ ಭಾಸವಾಗತೊಡಗಿದೆ. ಬಿಎಸ್ಪಿ ಬ್ರಾಹ್ಮಣ ಸಮ್ಮೇಳನಗಳನ್ನು ನಡೆಸಿದರೆ, ಎಸ್ಪಿ ಪರಶುರಾಮನ ಮೂರ್ತಿ, ಪರುಶರಾಮನ ಜಯಂತಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಸಕ್ರಿಯವಾಗಿವೆ. ಆದಾಗ್ಯೂ ಎಸ್ಪಿಗೆ ಗಣನೀಯ ಪ್ರಮಾಣದಲ್ಲಿ ವಿಪ್ರ ಸಮುದಾಯದ ಮತಗಳು ಸಿಗುವುದು ದುರ್ಲಭ ಎಂದೇ ಹೇಳಲಾಗುತ್ತಿದೆ.
ಈ ನಡುವೆ ರಾಜ್ಯದಲ್ಲಿ ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಬ್ರಾಹ್ಮಣರ ನೇತೃತ್ವಕ್ಕೆ ಒತ್ತುಕೊಡಲಾರಂಭಿಸಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೊಬ್ಬರು ಮುಖ್ಯಮಂತ್ರಿಯಾಗಬೇಕು ಎನ್ನುವಷ್ಟರ ಮಟ್ಟಿಗೆ ಮುಂದುವರಿದಿದೆ. ಆದರೆ ಕಾಂಗ್ರೆಸ್ ಪಕ್ಷದ ಈ ಕಸರತ್ತು ಅದಕ್ಕೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ ಎಂಬುದು ಕಾಲ ನಿರ್ಣಯಿಯಸಲಿದೆ. ಏಕೆಂದರೆ ಯುಪಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವ ಸ್ಥಿತಿಯಂತೂ ಸದ್ಯಕ್ಕೆ ಕಾಣಿಸುತ್ತಿಲ್ಲ.
ಪ್ರಿಯಾಂಕಾ ಗಾಂಧಿ ಪ್ರವೇಶ
ಬಿಜೆಪಿ ಬ್ರಾಹ್ಮಣ ಹಿತಕ್ಕೆ ವಿರುದ್ಧವಾಗಿದೆ ಎಂದು ಜನಾಂದೋಲನವನ್ನೇ ಸಂಘಟಿಸಿದ್ದ ಜಿತಿನ್ ಪ್ರಸಾದ್ ರಂತಹ ನಾಯಕರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸ್ವತಃ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಹೊಸ ಹುಮ್ಮಸ್ಸಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಲ್ಲಿ ಪಕ್ಷಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾನಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷ ಸಿದ್ದವಿದೆ ಎಂದು ಈಗಾಗಲೇ ಘೋಷಿಸಿದ್ದಾರೆ.
ಮಾಯಾವತಿ ಲೆಕ್ಕಾಚಾರ
ಹಿಂದಿನ ಚುನಾವಣೆಗಳಲ್ಲಿ ಬಿಎಸ್ಪಿಗೆ ಸೀಟುಗಳು ಕಡಿಮೆ ದೊರಕಿರಬಹುದು. ಆದರೆ, ಈಗಲೂ ಸಹ ಶೇ.19 ರಿಂದ 20ರಷ್ಟು ದಲಿತ ಮತ್ತು ಮುಸ್ಲಿಂ ಮತಗಳ ಬೆಂಬಲ ಮಾಯಾವತಿ ಪಕ್ಷಕ್ಕಿದ್ದೇ ಇದೆ. ಜತೆಗೆ ತಮ್ಮ ಪಕ್ಷದ ಬ್ರಾಹ್ಮಣ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್ ನೀಡುವ ವಿಷಯದಲ್ಲಿ ಮಾಯಾವತಿ ಉದಾರ ನೀತಿ ಅನುಸರಿಸುತ್ತಾರೆ. ಇದರಿಂದಾಗಿ ರಾಜ್ಯದಲ್ಲಿರುವ ಬ್ರಾಹ್ಮಣರ ಒಟ್ಟು ಮತಗಳ ಪೈಕಿ ಶೇ. 30-40ರಷ್ಟು ಮತಗಳು ಬಿಎಸ್ ಪಿಗೆ ಬಂದರೂ ಸಾಕು. ಬ್ರಾಹ್ಮಣರು, ಬಿಎಸ್ಪಿಯ ಮತಗಳ ಜತೆಗೆ ಇತರ ಮತಗಳ ಮೂಲಕ ಬಹುಮತಕ್ಕೆ ಹತ್ತಿರ ಹೋಗಲು ಸಾಧ್ಯ ಎಂಬುದು ಮಾಯಾವತಿ ಲೆಕ್ಕಾಚಾರ.
ಕೇವಲ ಬ್ರಾಹ್ಮಣರು ಮಾತ್ರವಲ್ಲ. ಎಲ್ಲ ಜಾತಿ, ವರ್ಗಗಳ ಬೆಂಬಲ ಪಡೆಯಲು ನಾವು ಯತ್ನಿಸುತ್ತೇವೆ ಎಂಬುದು ಬಿಎಸ್ಪಿ ಮುಖಂಡರ ವಾದ. ಪಕ್ಷ ಅಧಿಕಾರದಲ್ಲಿದ್ದಾಗ ಪ್ರತಿಯೊಂದು ಜಾತಿ ಸಮುದಾಯಕ್ಕೂ ಅಧಿಕಾರದಲ್ಲಿ ಪಾಲು ನೀಡುವ ಪ್ರಯತ್ನವನ್ನು ಬಿಎಸ್ಪಿ ಪರಿಪಾಲಿಸಿದೆ ಎಂಬುದು ಅವರು ನೀಡುವ ಸಬೂಬು.
ಆದರೆ ಸ್ವತಃ ರಜಪೂತ ಸಮುದಾಯಕ್ಕೆ ಸೇರಿದ ಯೋಗಿ ಆದಿತ್ಯನಾಥ್ ಸರ್ಕಾರ ಬ್ರಾಹ್ಮಣರನ್ನು ಕಡೆಗಣಿಸಿ ಠಾಕೂರರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ. ಉತ್ತರ ಪ್ರದೇಶದಲ್ಲಿ ಪೂರ್ವಾಂಚಲ ಭಾಗದಲ್ಲಿ ಯೋಗಿ ಸರ್ಕಾರ ಅನುಸರಿಸಿದ ರಾಜಕೀಯ ಬೆಳವಣಿಗೆಗಳು ಇದಕ್ಕೆ ಪುಷ್ಟಿ ನೀಡುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಪ್ರಬಲವಾಗಿರುವ ಜಾಟ್ ಜನಸಮುದಾಯ ಬೆಂಬಲ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ಅವಲಂಬಿಸಿರುವ ಜಾಟರು ರಸ್ತೆ ಬದಿಗೆ ಬೀಳುವಂತಾಗಿದೆ. ವಿರೋಧದ ನಡುವೆಯೂ ಕೇಂದ್ರ ಜಾರಿಗೆ ತಂದ ವಿವಾದಾತ್ಮಕ ಕೃಷಿ ಕಾನೂನುಗಳು ಇದಕ್ಕೆ ಕಾರಣ.
ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಬೆಂಬಲಿಸಿ ಮೋಸ ಹೋದ, ಇದೇ ರೀತಿಯ ಅನುಭವವನ್ನು ಬ್ರಾಹ್ಮಣ ಸಮುದಾಯ ಪಡೆಯುವಂತಾಗಿದೆ. ರಾಜಕೀಯ ವಿರೋಧಿ ಠಾಕೂರರಿಗೆ ಸಿಗುತ್ತಿರುವ ಪ್ರಾಧಾನ್ಯತೆ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯಂತಹವರ ಎನ್ಕೌಂಟರ್ ಮತ್ತಿತರ ಪ್ರಕರಣಗಳು ಇದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
ಒಟ್ಟಾರೆ ಜಾತಿ ನಿರ್ಮೂಲನೆ ಬಾಬಾ ಸಾಹೇಬ್ ಅಂಬೇಡ್ಕರ್ ಸಿದ್ಧಾಂತವಾಗಿತ್ತು. ಆದರೆ, ಜಾತಿ ಸತ್ಯ ಮತ್ತು ವಾಸ್ತವ ಎಂಬುದು ಕಾನ್ಷಿರಾಂ ನಂಬಿಕೆಯಾಗಿತ್ತು. ಅಧಿಕಾರದಲ್ಲಿ ಪಾಲು ಸಿಗದ ಜಾತಿಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಅಧಿಕಾರದಲ್ಲಿ ಪಾಲು ಸಿಗಬೇಕು. ಸಮಾಜದಲ್ಲಿರುವ ಬಹುಜನರು ಗದ್ದುಗೆ ಹಿಡಿಯಬೇಕು ಎಂಬುದು ಕಾನ್ಷಿರಾಂ ಹಂಬಲವಾಗಿತ್ತು. ಆದರೆ ಇವತ್ತು ಬಿಎಸ್ಪಿ ತಾನು ನಂಬಿದ ಮೂಲತತ್ವಗಳಿಂದ ವಿಮುಖವಾಗುತ್ತಿದೆ ಎಂಬ ಟೀಕೆಗಳಿವೆ. ಅಧಿಕಾರ ಹಿಡಿದಾಗ ಮಾತ್ರ ಪರಿವರ್ತನೆ ಸಾಧ್ಯ ಎಂಬ ವಾದಗಳೂ ಇವೆ. ಇವುಗಳ ನಡುವೆ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ. ಅಧಿಕಾರಕ್ಕಾಗಿ ತಾನು ನಂಬಿದ ತತ್ವ-ಸಿದ್ಧಾಂತಗಳಿಗೆ ತಿಲಾಂಜಲಿ ಹಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳೂ ಇವೆ. ಜಿದ್ದಾಜಿದ್ದಿನ ರಾಜಕೀಯ ಸನ್ನಿವೇಶದಲ್ಲಿ ಅದು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ.




