ಅತ್ತ ಯಡಿಯೂರಪ್ಪ ಅಧಿಕಾರದಿಂದ ಇಳಿಯಲು ಕ್ಷಣಗಣನೆ: ತಲ್ಲಣದಲ್ಲಿ ನಿಗಮ ಮಂಡಳಿ ಅಧ್ಯಕ್ಷರು

ವಿಶೇಷ ವರದಿ: ದಯಾಶಂಕರ ಮೈಲಿ
ಮೈಸೂರು: ವಿಧಾನಸೌಧದ 3 ನೇ ಮಹಡಿಯ ಸಿಎಂ ಸ್ಥಾನದಿಂದ ಯಡಿಯೂರಪ್ಪನವರು ಇಳಿಯಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಮೈಸೂರು ಭಾಗದಲ್ಲಿ ನಾನಾ ನಿಗಮ ಮಂಡಳಿಗೆ ಅಧ್ಯಕ್ಷರಾಗಿರುವ ಮಂದಿ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಆತಂಕ, ತಲ್ಲಣ, ದುಗುಡ, ದುಮ್ಮಾನದಲ್ಲಿ ಇದ್ದಾರೆ.
ಮೈಸೂರು ಜಿಲ್ಲೆಯ 6 ಮಂದಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಇವರೆಲ್ಲರೂ ನೇಮಕವಾಗಿ ಹೆಚ್ಚು ಕಡಿಮೆ ವರ್ಷವೂ ಆಗಿಲ್ಲ. ಅದರಲ್ಲೂ ಬಹು ಕಾಲದಿಂದಲೂ ಯಡಿಯೂರಪ್ಪನವರ ಕುಟುಂಬದವರೊಡನೆ ಗಳಸ್ಯ, ಕಂಠಸ್ಯರಾಗಿರುವ ಕಾಪು ಸಿದ್ದಲಿಂಗಸ್ವಾಮಿ ಅವರು ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ವಾರವಾಗಿದೆ ಅಷ್ಟೇ. ನಟಿ ಶೃತಿ ಅವರಿಗೆ ನೀಡಿದ್ದ ಪ್ರವಾಸೋದ್ಯಮ ಅಭಿವೃದ್ದಿ ನಿಗಮಕ್ಕೆ ಸಿದ್ದಲಿಂಗ ಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ನಿಗಮ ಮಂಡಳಿಗೆ ನೇಮಕವಾಗಿರುವ ಎಲ್ಲರೂ ಯಡಿಯೂರಪ್ಪನವರ ಕೃಪಾಕಟಾಕ್ಷವನ್ನು ಪಡೆದವರೇ. ಹೀಗಾಗಿ ಎಲ್ಲರೂ ಯಡಿಯೂರಪ್ಪನವರು ಅಧಿಕಾರದಿಂದ ಇಳಿದರೇ ತಮ್ಮ ಅಧ್ಯಕ್ಷ ಸ್ಥಾನ ಹೋಗುವುದು ಖಚಿತ ಎಂದು ತಿಳಿದು ಆತಂಕದಲ್ಲಿ ಇದ್ದಾರೆ.
ನಿರಾಣಿ ಆದರೆ ನಿರುಮ್ಮಳ
ಹಾಲಿ ಸಚಿವ ಮುರುಗೇಶ್ ನಿರಾಣಿ ಅವರು ಮುಖ್ಯಮಂತ್ರಿ ಆದರೆ ತಮ್ಮ ಸ್ಥಾನ ಉಳಿಯಬಹುದು ಎಂಬ ಚಿಂತನೆಯಲ್ಲಿ ಇದ್ದಾರೆ. ಹೇಗೆಂದರೇ ನಿರಾಣಿ ಅವರು ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರು. ಇವರಾದರೇ ಯಡಿಯೂರಪ್ಪನವರು ನೇಮಕ ಮಾಡಿದವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸುವುದಿಲ್ಲ ಎಂದು ಆಶಾಭಾವನೆಯನ್ನು ಇಟ್ಟುಕೊಂಡಿದ್ದಾರೆ. ಇದೇ ವೇಳೆ ಕೆಲವರು ನಿರಾಣಿ ಸಿಎಂ ಆಗದೇ ಪ್ರಹ್ಲಾದ್ ಜೋಷಿ, ಸಿ.ಟಿ.ರವಿ ಆದರೆ ಅವರನ್ನು ಯಾರ ಕಡೆಯಿಂದ ಓಲೈಸಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲೂ ತೊಡಗಿದ್ದಾರೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಚ್.ವಿ. ರಾಜೀವ್, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಎಲ್.ಆರ್ .ಮಹಾದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಹೇಮಂತ್ ಕುಮಾರ್ ಗೌಡ, ದೇವರಾಜ ಅರಸು ನಿಗಮದ ಅಧ್ಯಕ್ಷರಾಗಿ ಕೌಟಿಲ್ಯ ರಘು, ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಕಾಪು ಸಿದ್ದಲಿಂಗಸ್ವಾಮಿ ಮತ್ತು ಜಂಗಲ್ ಲಾಡ್ಜ್ ನಿಗಮ ಅಧ್ಯಕ್ಷರಾಗಿ ಅಪ್ಪಣ್ಣ ನೇಮಕವಾಗಿದ್ದಾರೆ.
ಕೆಲ ಅಧ್ಯಕ್ಷರು ಯಡಿಯೂರಪ್ಪ ನೇತೃತ್ವದ ಸರ್ಕಾರ ಹೋಗಿ ಬೇರೆಯವರು ಮುಖ್ಯಮಂತ್ರಿ ಆಗುವುದು ನಮ್ಮ ಪಕ್ಷದವರೇ, ಒಂದು ವೇಳೆ ಹೊಸದಾಗಿ ಸಿಎಂ ಆದವರು ರಾಜಿನಾಮೆ ಕೇಳಿದರೇ ನೀಡಲು ತಯಾರು ಇದ್ದೇವೆ ಎಂದು ಹೇಳಿದ್ದರೂ, ಹೊಸದಾಗಿ ಸಿಎಂ ಅದವರ ಮೇಲೆ ಒತ್ತಡ ಹೇರಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನವನ್ನು ತೆರೆಮರೆಯಲ್ಲಿ ಮಾಡುತ್ತಾರೆ ಎಂಬುದನ್ನು ತಳ್ಳಿಹಾಕುವಂತಿಲ್ಲ .
ಅಧಿಕಾರ ಹೋದರೆ ಹೋಗಲಿ, ನಮಗೇನು ಎಂಬ ಮನಸ್ಥಿತಿಯಲ್ಲಿ ಇಂದಿನ ರಾಜಕಾರಣಿಗಳು ಯಾವ ಪಕ್ಷದಲ್ಲೂ ಇಲ್ಲ . ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಬೇರೆ ಸಿಎಂ ಮೂಲಕವೂ ಉಳಿಸಿಕೊಳ್ಳಬೇಕೆಂಬ ಯತ್ನ ನಡೆಸಲಾಗುತ್ತಿದೆ.
ಇನ್ನೂ ಕೆಲವರು ಯಡಿಯೂರಪ್ಪನವರು ಇಳಿದರೆ , ವಿಜೇಂದ್ರ ಅವರು ಉಪ ಮುಖ್ಯಮಂತ್ರಿ ಮತ್ತು ಉತ್ತಮ ಖಾತೆ ಸಿಕ್ಕಿದರೆ ಎಂದು ಮನದಲ್ಲಿ ನೆನೆಯುತ್ತಾ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುವುದು ಉಂಟು. ಏನೇ ಇರಲಿ, ಯಡಿಯೂರಪ್ಪನವರು ಜುಲೈ 26 ರಂದು ಇಳಿದರೇ ನಂತರ ಮೈಸೂರು ಭಾಗದ ಬಿಜೆಪಿ ಮುಖಂಡರು, ಹೊಸ ಮುಖ್ಯಮಂತ್ರಿ ಬಂದ ಮೇಲೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವರೇ ? ಎಂಬ ಪ್ರಶ್ನೆಗೆ ಕೆಲ ದಿನಗಳಲ್ಲೇ ಸಿಗಲಿದೆ.




