Breaking NewsLatestಮೆಟ್ರೋರಾಜಕೀಯ

ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ: ಬಿಜೆಪಿಗೆ ಡಿ ಕೆ ಶಿವಕುಮಾರ್ ಸವಾಲ್

ಬೆಂಗಳೂರು: ‘ರಾಜ್ಯದ ಜನ ನೆರೆ, ಕೋವಿಡ್ ನಿಂದ ತತ್ತರಿಸಿ ಜೀವ ಹಾಗೂ ಜೀವನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ರಕ್ಷಣೆ ಮಾಡಲು ಸರ್ಕಾರ ವಿಫಲವಾಗಿದೆ. ಹೀಗಾಗಿ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ, ಅವರ ತೀರ್ಪಿನ ಪ್ರಕಾರ ಹೊಸ ಆಡಳಿತ ಬರಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರಕಾರಕ್ಕೆ ಸವಾಲೆಸೆದಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸೋಣ. ಜನರ ಬಳಿ ಹೋಗೋಣ. ಅವರು ಯಾವ ತೀರ್ಮಾನ ಮಾಡುತ್ತಾರೋ ಅದರ ಆಧಾರದ ಮೇಲೆ ಹೊಸ ಆಡಳಿತ ನೀಡೋಣ ಎಂದರು.

ಇನ್ನು ಪ್ರಕೃತಿ ವಿಕೋಪ ವಿಚಾರ. ಮುಖ್ಯಮಂತ್ರಿಗಳು ನೆರೆ ಪರಿಶೀಲನೆಗೆ ಇಂದು ಪ್ರವಾಸ ಮಾಡುತ್ತಿದ್ದಾರೆ. ಅವರ ಸ್ಥಾನ ಏನಾಗುತ್ತದೋ ಆ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಕಳೆದ ಮೂರು ವರ್ಷಗಳಿಂದ ಈ ರೀತಿ ಮಳೆ-ನೆರೆ ಬರುತ್ತಿದೆ. ನಮ್ಮ ಪಕ್ಷದಿಂದ ಆರ್.ವಿ. ದೇಶಪಾಂಡೆ ಹಾಗೂ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ತಂಡಗಳು ನೆರೆ ಪರಿಶೀಲನೆಗೆ ತೆರಳಿವೆ. ಬೆಳಗಾವಿಯಲ್ಲಿ ನಿಮ್ಮದೇ ಪಕ್ಷದ 10 ಕ್ಕೂ ಹೆಚ್ಚು ಶಾಸಕರಿದ್ದಾರೆ. ಸರ್ಕಾರವೂ ನಿಮ್ಮದೇ ಇದೆ. ಆದರೂ ಕಳೆದ ವರ್ಷದ ನೆರೆಗೆ ಪರಿಹಾರ ನೀಡಲು ನಿಮಗೆ ಸಾಧ್ಯವಾಗಿಲ್ಲ ಏಕೆ? ಮನೆ ಕಟ್ಟಿಕೊಡಲು ಆಗಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.

ಈ ಹಿಂದೆ ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ನೆರೆ ಬಂದಾಗ ಪ್ರಧಾನ ಮಂತ್ರಿಗಳು ಅಲ್ಲಿಗೆ ಭೇಟಿ ನೀಡಿದ್ದರು. ಆದರೆ ಕರ್ನಾಟಕಕ್ಕೆ ಯಾಕೆ ಬರಲಿಲ್ಲ?ನಮ್ಮ ರಾಜ್ಯಕ್ಕೆ ಯಾಕೆ ಸೂಕ್ತ ಪರಿಹಾರ ನೀಡಲಿಲ್ಲ? ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ? ಆದರೂ ಬಿಜೆಪಿ ಸಂಸದರು ಯಾಕೆ ಒತ್ತಡ ತರಲಿಲ್ಲ? ಲಸಿಕೆ ವಿಚಾರದಲ್ಲಿ ಗುಜರಾತಿಗೆಷ್ಟು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆಷ್ಟು ಕೊಟ್ಟಿದ್ದಾರೆ? ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿ ಕಳುಹಿಸಿಲ್ಲವೇ? ಇದೇನಾ ಬಿಜೆಪಿ, ಎನ್ ಡಿಎ ಸಂಸ್ಕೃತಿ?

ಬಿಜೆಪಿಗೆ ಅಧಿಕಾರ ನಡೆಸಲು, ಜನರ ಸೇವೆ ಮಾಡಲು ಅರ್ಹತೆ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಭಿವೃದ್ಧಿ ವಿಚಾರ ಪಕ್ಕಕ್ಕಿಡಿ. ಜನ ಕಷ್ಟದಲ್ಲಿರುವಾಗ, ಆಸ್ತಿ, ಜೀವ ಹಾಗೂ ಜೀವನ ಕಳೆದುಕೊಳ್ಳುತ್ತಿರುವಾಗ ಈ ಸರಕಾರ ಸ್ಪಂದಿಸಲಿಲ್ಲ. ಸಂಪೂರ್ಣ ವಿಫಲವಾಗಿದೆ. ಯಡಿಯೂರಪ್ಪ ಅವರು ಅಧಿಕಾರ ತೆಗೆದುಕೊಂಡ ದಿನದಿಂದ ರಾಜಕೀಯ ಅನಿಶ್ಚಿತತೆ ಇದೆ ಎಂದು ಅವರೇ ಹೇಳಿದ್ದಾರೆ. ಅದೇ ಅವರ ಆಡಳಿತ. ಅದೇ ಜನರಿಗೆ ಕೊಟ್ಟಿರುವ ಕೊಡುಗೆ.

Spread the love

Related Articles

Leave a Reply

Your email address will not be published. Required fields are marked *

Back to top button