
ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಸಿಎಂ ಆಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಲಿದ್ದಾರೆ. ಅದಕ್ಕಾಗಿ ಭರದ ಸಿದ್ದತೆ ನಡೆಯುತ್ತಿದ್ದು ಇದೇ ಮಾರ್ಚ್ 25ರಂದು ಯೋಗಿ ಗದ್ದುಗೆ ಏರಲು ಸಿದ್ದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಐದು ವರ್ಷಗಳ ಯಶಸ್ವಿ ಆಡಳಿತದ ನಂತರ ಯುಪಿಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ 37 ವರ್ಷಗಳ ಹಿಂದಿನ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ್ದಾರೆ ಯೋಗಿ ಆದಿತ್ಯನಾಥ್. ಮಾರ್ಚ್ 25 ರಂದು ಶಹೀದ್ ಪಥ್‌ನ ಏಕಾನಾ ಕ್ರೀಡಾಂಗಣದಲ್ಲಿ ಸಂಜೆ ನಾಲ್ಕು ಗಂಟೆಗೆ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೆ ಇತರೆ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಚಿವ ಸಂಪುಟದಲ್ಲಿ ಮಹಿಳೆಯರು ಮತ್ತು ಯುವಕರಿಗೆ ವಿಶೇಷ ಗಮನ ನೀಡಲಾಗುವುದು. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ಬಿಜೆಪಿಯ ಹಿರಿಯ ಪದಾಧಿಕಾರಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
