ಹಿಜಾಬ್ ಕುರಿತು ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ‘ವೈ’ ದರ್ಜೆ ಭದ್ರತೆ

ಬೆಂಗಳೂರು: ಹಿಜಾಬ್ ವಿವಾದ ಬಗ್ಗೆ ತೀರ್ಪು ನೀಡಿ ಕೊಲೆ ಬೆದರಿಕೆ ಎದುರಿಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಮೂವರು ನ್ಯಾಯಾಧೀಶರಿಗೆ ವೈ ದರ್ಜೆಯ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹಿಜಾಬ್ ವಿವಾದ ಕುರಿತು ತೀರ್ಪು ನೀಡಿದ ಮೂವರು ನ್ಯಾಯಾಧೀಶರನ್ನು ಹತ್ಯೆ ಮಾಡುವುದಾಗಿ ಮಧುರೈಯಲ್ಲಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿರೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನ್ಯಾಯಾಧೀಶರಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧದಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಬಂಧಿಸುವಂತೆ ಡಿಜಿ ಮತ್ತು ಐಜಿ ಅವರಿಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.
ದುರ್ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಡೋಂಗಿ ಜಾತ್ಯತೀತವಾದಿಗಳು ಯಾಕೆ ಮೌನವಾಗಿದ್ದಾರೆ, ಹಿಜಾಬ್ ವಿರುದ್ಧವಾಗಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಇಷ್ಟಾದ ಮೇಲೂ ಕೂಡ ವಿರೋಧ ಪಕ್ಷಗಳ ನಾಯಕರು ಮೌನವಾಗಿ ಕುಳಿತಿದ್ದಾರೆ ಎಂದರೆ ಯಾರನ್ನು ನೀವು ಒಲಿಸಿಕೊಳ್ಳಲು ನೋಡುತ್ತಿದ್ದೀರಿ. ಇದು ಜಾತ್ಯತೀತತೆ ಅಲ್ಲ, ಇದು ಕೋಮುವಾದ, ನಾನು ಈ ಮೌನವನ್ನು ಖಂಡಿಸುತ್ತೇನೆ, ನೀವು ಈ ಬಗ್ಗೆ ಮೌನ ಮುರಿದು ಮಾತನಾಡಲೇ ಬೇಕು, ಈ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಬೇಕು ಎಂದು ಸಿಎಂ ಹೇಳಿದ್ದಾರೆ.
