ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧಿಸಿ ದಿಢೀರ್ ಆದೇಶ; ಸಾಲುಗಟ್ಟಿ ನಿಂತ ವಾಹನಗಳು

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ರಸ್ತೆಯ ವಿವಿಧೆಡೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ ರಾತ್ರಿ 7ರಿಂದ ಬೆಳಗ್ಗೆ 6ಗಂಟೆವರೆಗೆ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ದಿಢೀರ್ ಆದೇಶ ಹೊರಡಿಸಿದ್ದಾರೆ.
ದಿಢೀರ್ ಆದೇಶದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಾಗಿರುವ ವಿಲ್ಲುಪುರಂ-ಮಂಗಳೂರು ರಸ್ತೆಯ ಕೊಟ್ಟಿಗೆಹಾರದಲ್ಲಿ ವಾಹನಗಳು ಸಾಲುಗಟ್ಟಿ ನಿಲುಗಡೆಗೊಳ್ಳತೊಡಗಿವೆ.
ಅತ್ತ ಎರಡು ದಿನಗಳಿಂದ ಶಿರಾಡಿ ಘಾಟಿ ಬಂದ್ ಆಗಿದ್ದರಿಂದ ಪರ್ಯಾಯ ರಸ್ತೆಯಾಗಿ ಬಳಸಲಾಗಿದ್ದ ಚಾರ್ಮಾಡಿ ರಸ್ತೆಯಲ್ಲೂ ಸಂಚಾರಕ್ಕೆ ತೊಡಕಾಗಿದ್ದು, ಎತ್ತ ಧಾವಿಸುವುದೆಂದು ದಿಕ್ಕು ತೋಚದೆ, ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಗಿದೆ.

ಈ ನಡುವೆ ಕೊಟ್ಟಿಗೆಹಾರ ತನಿಖಾ ಠಾಣೆಯಲ್ಲಿ ಸಿಬ್ಬಂದಿಗಳ ಜತೆ ಅನೇಕ ವಾಹನ ಸವಾರರು ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿಗಳು ಪರಿಸ್ಥಿತಿಯ ಬಗ್ಗೆ ಜನರಲ್ಲಿ ಮನವರಿಕೆ ಮಾಡುತ್ತಿದ್ದು, ನಿಯಂತ್ರಿಸುವುದು ಕಷ್ಟವಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಲ್ಲಿ ಹಗಲು ಹೊತ್ತಿನಲ್ಲಿ ಬೆಳಗ್ಗೆ 6ರಿಂದ ಸಂಜೆ 7 ಗಂಟೆವರೆಗೆ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೆಎಸ್ಆರ್ಟಿಸಿ ಬಸ್, ಆರು ಚಕ್ರದ ಲಾರಿ, ಟೆಂಪೋ ಹಾಗೂ ಸಣ್ಣ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಉಳಿದಂತೆ ರಾಜಹಂಸ ಬಸ್, ಹೆವೀ ಲೋಡ್ ವಾಹನಗಳು, ಸರಕು ಸಾಗಣೆಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ತುರ್ತು ಆರೋಗ್ಯ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.
