ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್; ರಾಜ್ಯದಲ್ಲಿ ಪ್ರತಿ ಬುಧವಾರ ಕೋವಿಡ್ ಲಸಿಕಾ ಉತ್ಸವ

ಬೆಂಗಳೂರು: ರಾಜ್ಯದಲ್ಲಿ ವರ್ಷಾಂತ್ಯದೊಳಗೆ ಪ್ರತಿಯೊಬ್ಬರಿಗೂ ಎರಡು ಡೋಸ್ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ ಪ್ರತಿ ಬುಧವಾರ ರಾಜ್ಯದಲ್ಲಿ ವಿಶೇಷ ಕೋವಿಡ್ ಲಸಿಕಾ ಉತ್ಸವ ಹಮ್ಮಿಕೊಳ್ಳಲು ಮುಂದಾಗಿದೆ.
ಸೋಮವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಉನ್ನತಮಟ್ಟದ ಸಭೆ ನಂತರ ಆರೋಗ್ಯ ಸಚಿವ ಸುಧಾಕರ್ ರೆಡ್ಡಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಸಂಭಾವ್ಯ ಕೋವಿಡ್ ಮೂರನೇ ಅಲೆಯನ್ನು ತಡೆಯಲು ಅಗತ್ಯವಾದ ಕಾರ್ಯತಂತ್ರ ರೂಪಿಸುವ ಹಿನ್ನೆಲೆಯಲ್ಲಿ ಉನ್ನತಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ನಾಳಿದ್ದು ಸೆಪ್ಟಂಬರ್ 1 ರಿಂದ ರಾಜ್ಯದಲ್ಲಿ ನಿತ್ಯ 5 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗುವುದು. ಲಸಿಕಾ ಉತ್ಸವದ ದಿನ 10ಲಕ್ಷ ಮಂದಿಗೆ ಲಸಿಕೆ ಹಾಕಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಮೂರನೇ ಅಲೆ ಇನ್ನೂ ಆರಂಭವಾಗಿಲ್ಲ.ಅದನ್ನು ತಡೆಯಲು ಲಸಿಕಾ ಅಭಿಯಾನವನ್ನು ವೇಗಗೊಳಿಸಿದ್ದೇವೆ ಎಂದು ಸಚಿವ ಸುಧಾಕರ್ ಹೇಳಿದರು.
ಕೆಲವು ರಾಜ್ಯಗಳಲ್ಲಿ ಈಗಾಗಲೇ ಮೂರನೇ ಅಲೆ ಆರಂಭವಾಗಿದೆ. ರಾಜ್ಯದಲ್ಲಿ ಒಂದು ವೇಳೆ ಮೂರನೆ ಅಲೆ ಬಂದರೂ ಅಗತ್ಯವಾದ ಔಷಧೋಪಚಾರ ಸೇರಿದಂತೆ ಮುಂಜಾಗ್ರತಾವಾಗಿ ಕೈಗೊಳ್ಳಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಜ್ಜಾಗಿದೆ ಎಂದು ಸ್ಪಷ್ಟಪಡಿಸಿದರು.
ಈವರೆಗೆ ರಾಜ್ಯದಲ್ಲಿ 4.10 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ.65ರಷ್ಟು ಮಂದಿಗೆ ಮೊದಲ ಹಾಗೂ ಶೇ.20 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಬೀದರ್, ಯಾದಗಿರಿ, ಕಲ್ಬುರ್ಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ಲಸಿಕೆ ವಿತರಣೆ ಹೆಚ್ಚಿಸಲಾಗುವುದು. ಗಡಿ ಜಿಲ್ಲೆಗಳ 20 ಕಿಲೋ ಮೀಟರ್ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಪ್ರಥಮ ಆದ್ಯತೆ ಮೇರೆಗೆ ಪ್ರತಿಯೊಬರಿಗೂ ಲಸಿಕೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೆಲವು ಜಿಲ್ಲೆಗಳಲ್ಲಿ ಮೊಬೈಲ್ ನಂಬರ್ ಗೊಂದಲದಿಂದಾಗಿ ಲಸಿಕೆಯ ನಿಖರ ಮಾಹಿತಿ ಸಿಗುತ್ತಿಲ್ಲ. ಮೊದಲ ಡೋಸ್ ಪಡೆಯುವಾಗ ಒಂದು ಮೊಬೈಲ್ ನಂಬರ್ ಮತ್ತು ನಂತರದ ಡೋಸ್ ಪಡೆಯುವಾಗ ಮತ್ತೊಂದು ಮೊಬೈಲ್ ನಂಬರ್ ನೀಡಿರುವುದು ಇದಕ್ಕೆ ಕಾರಣ ಎಂದು ವಿವರಿಸಿದರು.
ಕೊಳಗೇರಿಗಳಲ್ಲಿ ಲಸಿಕಾ ಮೇಳ
ಬೆಂಗಳೂರಿನಲ್ಲಿ ಈಗಾಗಲೇ ಒಂದು ಕೋಟಿ ಮಂದಿ ಲಸಿಕೆ ಪಡೆದಿದ್ದು, ಶೇ.27ರಷ್ಟು ಮಂದಿ ಎರಡನೇ ಲಸಿಕೆಯನ್ನೂ ಪಡೆದಿದ್ದಾರೆ. ಬೆಂಗಳೂರಿನ ಎಲ್ಲಾ ಕೊಳಗೇರಿಗಳಲ್ಲಿ ಲಸಿಕಾ ಮೇಳಗಳನ್ನು ಹಮ್ಮಿಕೊಳ್ಳಲಾಗುವುದು. ಇನ್ನೆರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಸಂಪೂರ್ಣ ಲಸಿಕಾ ಕಾರ್ಯಕ್ರಮ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
