Breaking NewsLatestಮೆಟ್ರೋ

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಡಿಎಂಕೆ ಶಾಸಕರೊಬ್ಬರ ಪುತ್ರ ಸೇರಿ 7 ಮಂದಿ ಸಾವು

ಬೆಂಗಳೂರು: ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಮೂವರು ಮಹಿಳೆಯರು, ನಾಲ್ವರು ಪುರುಷರು ಸೇರಿ 7 ಮಂದಿ ಮೃತಪಟ್ಟಿರುವ ಘಟನೆ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಸಮೀಪ ನಡೆದಿದೆ. ಮೃತಪಟ್ಟವರನ್ನು ಹೊಸೂರು ಮೂಲದ ಕರುಣಾ ಸಾಗರ್ (28), ಬಿಂದು (28), ಇಶಿತಾ (21), ಡಾ.ಧನುಶಾ (21), ಹುಬ್ಬಳ್ಳಿಯ ರೋಹಿತ್ (23), ಕೇರಳ ಮೂಲದ ಅಕ್ಷಯ್ ಗೋಯಲ್ ಹಾಗೂ ಹರ್ಯಾಣದ ಉತ್ಸವ್ ಎಂದು ಗುರುತಿಸಲಾಗಿದೆ.

ಮಂಗಳವಾರ ಮುಂಜಾನೆ 1.45ರ ಸುಮಾರಿಗೆ ಐಷಾರಾಮಿ ಕಾರು ಅಪಘಾತ ನಡೆದಿದ್ದು, ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರುಣಾಸಾಗರ್ (28) ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ಪುತ್ರ ಎಂದು ತಿಳಿದು ಬಂದಿದೆ.

ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಫುಟ್‌ಪಾತ್ ಹತ್ತಿ ಡಿವೈಡರ್‌ಗೆ ಡಿಕ್ಕಿಯಾಗಿ ನಂತರ ಪಕ್ಕದ ಗೋಡೆಗೆ ಗುದ್ದಿದೆ. ಅಪಘಾತಕ್ಕೆ ತುತ್ತಾದ ಕಾರು ಕೆಎ 03, ಎಂವೈ 6666 ಎಂಬ ಫ್ಯಾನ್ಸಿ ನಂಬರ್ ಹೊಂದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತಪಟ್ಟವರೆಲ್ಲರೂ ಸ್ನೇಹಿತರು.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದ ಭೀಕರತೆಗೆ ಕಾರಿನ ಎಡಭಾಗದ ಎರಡು ಟೈರ್‌ಗಳು ಸ್ಫೋಟಗೊಂಡು ರಸ್ತೆಗೆ ಹಾರಿ ಬಿದ್ದಿವೆ. ಮೃತಪಟ್ಟವರಲ್ಲಿ ಕೆಲವರು ಕೋರಮಂಗಲದ ಜೋಲೋ ಸ್ಟೇ ಪಿಜಿಯಲ್ಲಿ ವಾಸವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆಡುಗೋಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button