ಚಾಕ್ಲೇಟ್ ತಿಂದು ನಾಲ್ಕು ಮಕ್ಕಳು ಸಾವು

ಲಕ್ನೋ: ಮನೆಯ ಪ್ಲಾಸ್ಟಿಕ್ ಚೀಲದಲ್ಲಿ ಸಿಕ್ಕ ಮಿಠಾಯಿ ತಿಂದು ನಾಲ್ಕು ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕುಶಿ ನಗರದಲ್ಲಿ ನಡೆದಿದೆ.
ಮಂಜನ (5), ಸ್ವೀಟಿ (3), ಸಮರ್ (2), ಹಾಗೂ ಅರುಣ್(5) ಮೃತಪಟ್ಟ ಮಕ್ಕಳು. ದಿಲೀಪ್ ನಗರದ ನಿವಾಸಿ ಮುಖಿಯಾ ದೇವಿ ಬೆಳಗ್ಗೆ ತಮ್ಮ ಮನೆಯ ಮುಂದೆ ಸ್ವಚ್ಚಗೊಳಿಸುವ ವೇಳೆ ಪ್ಲಾಸ್ಟಿಕ್ ಚೀಲದಲ್ಲಿ ಐದು ಚಾಕ್ಲೇಟ್ ಹಾಗೂ ಕೆಲವು ನಾಣ್ಯಗಳು ಸಿಕ್ಕಿದ್ದವು. ಪ್ಯಾಸ್ಟಿಕ್ ಕವರ್ ನಲ್ಲಿದ್ದ ಚಾಕ್ಲೇಟನ್ನು ತಮ್ಮ ಮೂವರು ಮಕ್ಕಳಿಗೆ ಹಾಗೂ ಪಕ್ಕದ ಮನೆಯ ಮಗುವಿಗೆ ನೀಡಿದ್ದರು.
ಚಾಕ್ಲೇಟ್ ತಿಂದ ಕೆಲವ ಸಮಯದಲ್ಲಿ ನಾಲ್ವರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಪಾಲಕರು ಪ್ರಜ್ಞಾಹೀನ ಸ್ಥೀತಿಯಲ್ಲಿದ್ದ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ಉಳಿದ ಒಂದು ಚಾಕ್ಲೇಟ್ ಅನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ವರದಿ ಬಂದ ಬಳಿಕವಷ್ಟೇ ಮಕ್ಕಳ ಸಾವಿಗೆ ಕಾರಣ ತಿಳಿದು ಬರಲಿದೆ.
ಗ್ರಾಮಸ್ಥರ ಪ್ರಕಾರ, ಚಾಕೊಲೇಟ್ ಕವರ್ ಮೇಲೆ ಕುಳಿತಿದ್ದ ನೊಣಗಳು ಸಹ ಸಾವನ್ನಪ್ಪಿವೆ. ಮತ್ತೊಂದೆಡೆ ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಘೋಷಿಸಲಿದ್ದಾರೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
