ಸಂಭ್ರಮದ ಮನೆಯಲ್ಲಿ ಸೂತಕ: ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ತಂದೆ ಸಾವು, ಮಗಳು ಗಂಭೀರ

ಬೆಂಗಳೂರು: ಸಡಗರ ಸಂಭ್ರಮದಲ್ಲಿದ್ದ ಮನೆಯಲ್ಲಿಗ ಸೂತಕದ ಛಾಯೇ ಆವರಿಸಿಕೊಂಡಿದೆ. ಮಗಳ ಎಂಗೇಜ್ ಮೆಂಟ್ ಖುಷಿಯಲ್ಲಿದ್ದ ತಂದೆ, ಮಗಳ ಜೊತೆ ಬಟ್ಟೆ ಖರೀದಿಸಿ ಬರುವಾಗ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡು ಅಸುನೀಗಿದ್ದು ಮಗಳಿಗೆ ಗಂಭೀರ ಗಾಯವಾಗಿರುವ ಘಟನೆ ನಗರದ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಮಂಗನಹಳ್ಳಿ ಬ್ರಿಡ್ಜ್ ಬಳಿ ಬೆಸ್ಕಾಂ ಸಂಸ್ಥೆಯ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ತಂದೆ ಮಗಳಿಗೆ ಗಂಭೀರ ಗಾಯಗಳಾಗಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಶಿವರಾಜ್ (55) ಹಾಗೂ ಚೈತನ್ಯಾ (18) ರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಶಿವರಾಜ್ ಅಸುನೀಗಿದ್ದು ಚೈತನ್ಯಾರಿಗೆ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಎಸ್ ಟಿ ಸೋಮಶೇಖರ್ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಂತ ನಡೆದಿದೆ. ಟ್ರಾನ್ಸ್ಫಾರ್ಮರ್ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ. ಬೆಸ್ಕಾಂ ಇಇ ವಿರುದ್ಧ ಎಫ್‌ಐಆರ್ ದಾಖಲಿಸಲು ಜ್ಞಾನಭಾರತಿ ಠಾಣೆಯ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿದ್ದೇನೆ ಎಂದರು.
ಗಾಯಳ ಚೈತನ್ಯಾರ ಎಂಗೇಜ್ಮೆಂಟ್ ಏಪ್ರಿಲ್ ತಿಂಗಳಲ್ಲಿ ಫಿಕ್ಸ್ ಆಗಿತ್ತು. ಮುಂದಿನ ವಾರ ಸಂಬಂಧಿಕರ ಮದುವೆ ಇದ್ದು ಅದಕ್ಕಾಗಿ ಅಪ್ಪ, ಮಗಳು ಬಟ್ಟೆ ಖರೀದಿಸಲು ತೆರಳಿದ್ದರು. ಬಟ್ಟೆ ಖರೀದಿ ಮಾಡಿ ವಾಪಸ್ ಬರುವಾಗ ಅವಘಡ ಸಂಭವಿಸಿದೆ.
ಟ್ರಾನ್ಸ್ಫಾರ್ಮರ್ ಬಳಿ ಹಂಪ್ ಇದ್ದು ಬೈಕ್ ನಿಧಾನ ಮಾಡಿದ್ದಾಗ ಟ್ರಾನ್ಸ್ಫಾರ್ಮರ್ ಬ್ಲಾಸ್ಟ್ ಆಗಿದೆ. ಟ್ರಾನ್ಸ್ಫಾರ್ಮರ್ ಆಯಿಲ್ ಇಬ್ಬರ ಮೇಲೂ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ದಡಿ ಕೇಸ್ ದಾಖಲಿಸುವುದಾಗಿ ಗಾಯಾಳು ಚೈತನ್ಯಾರ ಚಿಕ್ಕಪ್ಪ ಶ್ರೀಧರ್ ಹೇಳಿದ್ದಾರೆ.
