ಮೃತ ನವೀನ್ ಮನೆಗೆ ಇಂದು ರಾಜ್ಯಪಾಲರ ಭೇಟಿ

ಹಾವೇರಿ: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್ ಶೇಖರಪ್ಪ ಗ್ಯಾನಗೌಡರ್ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಮಧ್ಯಾಹ್ನ ಭೇಟಿ ನೀಡಲಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿರುವ ರಾಜ್ಯಪಾಲರು ಬಳಿಕ ನವೀನ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.
ಮಾರ್ಚ್ 1ರಂದು ಸೂಪರ್ ಮಾರ್ಕೆಟ್ ಗೆ ತೆರಳಿದ್ದು ನವೀನ್ ಉಕ್ರೇನ್ ನಲ್ಲಿ ರಷ್ಯಾ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಸುಮಾರು 20 ದಿನಗಳ ಬಳಿಕ ಅಂದರೆ ಮಾರ್ಚ್ 21ನೇ ತಾರೀಖಿನಂದು ನವೀನ್ ಮೃತದೇಹವನ್ನ ಹುಟ್ಟೂರಿಗೆ ತರಲಾಯಿತು.
ನೋವಿನ ನಡುವೆಯು ನವೀನ್ ಹೆತ್ತವರು ಮಾನವೀಯತೆ ಮೆರಿದಿದ್ರು. ಮಗ ಡಾಕ್ಟರ್ ಆಗಬೇಕು ಎಂದು ಉಕ್ರೇನ್ ಗೆ ತೆರಳಿದ್ದ. ಆದರೆ ಅದು ಸಾಧ್ಯವಾಗಿಲ್ಲ. ಮಗನ ದೇಹ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಮೃತದೇಹಕ್ಕೆ ಅಂತಿಮ ಪೂಜೆ ಸಲ್ಲಿಸಿ ದಾವಣಗೆರೆಯ ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ಹಸ್ತಾಂತರಿಸಿದ್ದರು.
