Breaking NewsLatestಜಿಲ್ಲಾ ಸುದ್ದಿದಾವಣಗೆರೆ

ರಾಜ್ಯದ ಆಂತರಿಕ ಸುರಕ್ಷತೆ ಬಗ್ಗೆ ಯಾವುದೇ ರಾಜಿ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ದಾವಣಗೆರೆ: ಇಂದು ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ರಾಜ್ಯದಲ್ಲಿಯೂ ಅನೇಕ ಸಮಸ್ಯೆ ಇವೆ. ಆದರೆ ರಾಜ್ಯದ ಆಂತರಿಕ ಸುರಕ್ಷತೆ ಬಗ್ಗೆ ಯಾವುದೇ ರಾಜಿ ಇಲ್ಲ. ಎನ್‍ಐಎ ಜೊತೆ ಕೈಜೋಡಿಸಿ, ಉಗ್ರ ಸಂಘಟನೆಗಳ ಪತ್ತೆ ಹಚ್ಚಿ, ಭಯೋತ್ಪಾದನೆಯ ಪ್ರಯತ್ನವನ್ನು ಸೆದೆ ಬಡಿಯಲು ಉಗ್ರ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ಜಿಎಂಐಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ನಿಧಾನವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ತಡೆಯುವಲ್ಲಿ ವಿಳಂಬವಾಗುತ್ತಿದೆ ಎಂಬ ಉದ್ದೇಶದಿಂದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯ ಮಾಡುವಂತೆ ಕೇಂದ್ರ ಗೃಹ ಸಚಿವರು ಸೂಚಿಸಿದಂತೆ ಕ್ರಮ ವಹಿಸಲಾಗುತ್ತಿದೆ. ಹಾಗೂ ಅಪರಾಧ ಸ್ಥಳದಲ್ಲಿ ಅಧಿಕಾರಿಗಳು ಇರಬೇಕೆಂಬುದನ್ನೂ ಸಹ ಪಾಲಿಸಲಾಗುತ್ತಿದೆ. ಗೃಹ ಸಚಿವರ ಮಾರ್ಗದರ್ಶನ ಸದಾ ರಾಜ್ಯಕ್ಕೆ ಇರಲಿದೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕನ್ನಡಿಗರ ಮೇಲೆ ಅಪಾರ ಪ್ರೀತಿ ವಿಶ್ವಾಸವಿದ್ದು, ದೇಶದ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ದೇಶದ ಅಖಂಡತೆ, ಐಕ್ಯತೆಗಾಗಿ ದಿಟ್ಟವಾಗಿ ಹೋರಾಡಿದ ವಲ್ಲಭಬಾಯಿ ಪಟೇಲ್‍ನ ನಂತರ ಅವರಂತೆಯೇ ದೇಶದ ಏಕತೆಗಾಗಿ ಅಮಿತ್ ಶಾರವರು ದಿಟ್ಟತನ ತೋರಿದ್ದಾರೆ. ಇಂದು ಆಫ್ಘಾನಿಸ್ಥಾನದಲ್ಲಿ ಹೆಣ್ಣುಮಕ್ಕಳು, ಮಕ್ಕಳ ವಿಷಯದಲ್ಲಿ ಭೀತಿಯ ವಾತಾವರಣ ಇದ್ದು ಅವರ ಜೀವನ ಆತಂಕದಲ್ಲಿದೆ. ಆದರೆ ನಮ್ಮ ದೇಶದಲ್ಲಿ ಜಮ್ಮು ಕಾಶ್ಮೀರದ ಏಕತೆಗೆ ದಿಟ್ಟವಾಗಿ ಹೆಜ್ಜೆ ಇಟ್ಟಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಐತಿಹಾಸಿಕ ಸಾಧನೆ ತೋರಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಇಂದು ಲೋಕಾರ್ಪಣೆಗೊಂಡಿದ್ದು ಮಿಲಿಟರಿ ಶಾಲೆಯ ಮಾದರಿಯಲ್ಲಿ ಇಲ್ಲಿ ಉತ್ತಮ ಮತ್ತು ಶಿಸ್ತಿನ ಶಿಕ್ಷಣ ನೀಡಲಾಗುವುದು ಎಂದರು.

ವಿಶ್ವ ಗುರು ಸ್ಥಾನಕ್ಕೆ ಪ್ರಧಾನಿ ಕರೆ : ಸ್ವಾತಂತ್ರ್ಯ ಬಂದು 75 ವರ್ಷ ಸಂದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಪ್ರಧಾನಿಯವರು ಕರೆ ನೀಡಿದ್ದು, 100 ವರ್ಷ ತುಂಬುವುದರೊಳಗೆ ನಮ್ಮ ರಾಷ್ಟ್ರ ಇಡೀ ವಿಶ್ವದಲ್ಲೇ ಗುರು ಸ್ಥಾನ ಪಡೆಯುವಂತೆ ಸಂಕಲ್ಪ ತೊಡಬೇಕೆಂದು ಸಹ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಅಭಿವೃದ್ದಿ ಪಥದಲ್ಲಿ ಸಾಗೋಣ ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button