ಯುಎಇ, ಒಮನ್ ನಲ್ಲಿ ಟಿ20 ವಿಶ್ವಕಪ್: ಖಚಿತಪಡಿಸಿದ ಐಸಿಸಿ

ಮುಂಬೈ: ಭಾರತದಲ್ಲಿ ನಡೆಯಬೇಕಿದ್ದ ಟ್ವೆಂಟಿ20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ಷಿಪ್ ಕೋವಿಡ್ ಹಿನ್ನೆಲೆಯಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ಯುಎಇ ಮತ್ತು ಒಮನ್ ನಲ್ಲಿ ನಡೆಯಲಿದೆ ಎಂಬುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಂಗಳವಾರ ಖಚಿತಪಡಿಸಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಶೇಖ್ ಜಾಯೇದ್ ಕ್ರೀಡಾಂಗಣ ಅಬುಧಾಬಿ, ಶಾರ್ಜಾ ಕ್ರೀಡಾಂಗಣ ಮತ್ತು ಒಮನ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣ ಸೇರಿದಂತೆ ನಾಲ್ಕು ಕ್ರೀಡಾಂಗಣಗಳಲ್ಲಿ ಟಿ20 ವಿಶ್ವಕಪ್ ನಡೆಲಿದೆ. ಈ ಹಿಂದಿನ ವೇಳಾಪಟ್ಟಿ ಪ್ರಕಾರ ಭಾರತದಲ್ಲಿ ನಡೆಯಬೇಕಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿ ವಿಶ್ವಕಪ್ ನಡೆದರೂ ಆತಿಥ್ಯ ಮಾತ್ರ ಭಾರತದ ಹೆಸರಲ್ಲೇ ಉಳಿಯಲಿದೆ.
“2021ರ ವಿಶ್ವಕಪ್ ಅತ್ಯಂತ ಸುರಕ್ಷಿತವಾಗಿ ನಡೆಬೇಕೆಂಬುದು ನಮ್ಮ ಮೊದಲ ಆದ್ಯತೆ. ಆದರೆ ಭಾರತದಲ್ಲಿ ನಡೆಸಲು ಅಸಾಧ್ಯವಾಗುತ್ತಿರುವ ಬಗ್ಗೆ ನಮಗೆ ಬೇಸರವಿದೆ. ಭಾರತದಲ್ಲಿ ಜಾಗತಿಕ ಮಟ್ಟದ ಈ ಟೂರ್ನಿ ಅತ್ಯಂತ ವೈಭವದಿಂದ, ಯಶಸ್ವಿಯಾಗಿ ನಡೆಯಲಿದೆ ಎಂಬುದು ನಮಗೆ ತಿಳಿದಿರು ಸಂಗತಿ,” ಎಂದು ಐಸಿಸಿ ಹಂಗಾಮಿ ಸಿಇಒ ಜೆಫ್ ಎಲಾರ್ಡೀಸ್ ಹೇಳಿದ್ದಾರೆ. ಬಿಸಿಸಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಕೋವಿಡ್ -19 ಹಿನ್ನೆಲೆಯಲ್ಲಿ ಯುಎಇ 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ಆಯೋಜಿಸಿತ್ತು. 2021ರ ಆವೃತ್ತಿಯ ಉಳಿದ ಐಪಿಎಲ್ ಪಂದ್ಯಗಳಿಗೂ ಕೊಲ್ಲಿ ರಾಷ್ಟ್ರ ಆತಿಥ್ಯ ನೀಡಲಿದೆ.
