ಟಾಟಾ ಮಾರ್ಕೊಪೋಲೋ ಕಾರ್ಮಿಕರ ಅನಿರ್ಧಿಷ್ಟಾವಧಿ ಸತ್ಯಾಗ್ರಹ!

ಧಾರವಾಡ: ವೇತನ ಹೆಚ್ಚಳ ಹಾಗೂ ವಜಾಗೊಳಿಸಿರುವ ಉದ್ಯೋಗಿಗಳ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಧಾರವಾಡದಲ್ಲಿ ಟಾಟಾ ಮಾರ್ಕೊಪೋಲೋ ಕಂಪನಿಯ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವು ಇಂದು 10ನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರು ತಮ್ಮ ಕುಟುಂಬ ಸಮೇತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಟಿಯುಸಿಐ ಹಾಗೂ ಟಿಎಂಕೆಕೆಯು ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ, ಟಾಟಾ ಮಾರ್ಕೊಪೋಲೋ ಕಂಪನಿಯ ಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿತ್ತಿದ್ದು, ಈ ವೇಳೆ ರಾಜ್ಯ ಸರ್ಕಾರ, ಕಾರ್ಮಿಕ ಸಚಿವರ ವಿರುದ್ಧ ಸೇರಿದಂತೆ ಟಾಟಾ ಮಾರ್ಕೊಪೋಲೋ ಕಂಪನಿಯ ಅಧಿಕಾರಿಗಳ ವಿರುದ್ಧವು ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಟಾ ಮಾರ್ಕೊಪೋಲೋ ಕಂಪನಿಯಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಅಗತ್ಯ ಬೆಲೆಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ನಮ್ಮ ಸಂಬಳ ಮಾತ್ರ ಈ ಹಿಂದಿನ ಸಂಬಳವನ್ನೇ ಮುಂದುವರೆಸಲಾಗಿದೆ. ಇದರಿಂದಾಗಿ ನಮ್ಮ ಕುಟುಂಬಗಳು ಈಗ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ಹಾಗೂ ಕಾರ್ಮಿಕ ಸಂಕಷ್ಟಗಳ ಕುರಿತು ಧ್ವನಿ ಎತ್ತುವವರನ್ನು ಕಂಪನಿಯಿಂದ ಸುಮಾರು ಏಳು ಜನ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹಾಗಾಗಿ ಈ ಕೂಡಲೇ ಟಾಟಾ ಮಾರ್ಕೊಪೋಲೋ ಕಂಪನಿಯು ಕಾರ್ಮಿಕರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಕ್ಕಂತೆ ವೇತನ ಹೆಚ್ಚಳ ಹಾಗೂ ವಜಾಗೊಳಿಸಿರುವ ಕಾರ್ಮಿಕ ಮುಖಂಡರ ಮರು ನೇಮಕ ಮಾಡಬೇಕು. ಜೊತೆಗೆ ಕಾರ್ಮಿಕರಿಗೆ ಕಂಪನಿಯ ಅಧಿಕಾರಿಗಳು ನೀಡುವ ಕಿರುಕುಳ ಬಿಡಬೇಕು ಎಂದು ಅಗ್ರಹಿಸಿದರು.
ನಮ್ಮ ಬೇಡಿಕೆಗಳಿಗೆ ಸರ್ಕಾರ ಹಾಗೂ ಎಲ್ಲಿಯವರೆಗೆ ಸ್ಪಂದನೆ ನೀಡುವುದಿಲ್ಲವೋ, ಅಲ್ಲಿಯವರೆಗೂ ನಮ್ಮ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
