ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಸುಳ್ಳು ವದಂತಿಗಳನ್ನು ಹಬ್ಬಿಸಿ ದಾವಣಗೆರೆ ನಗರದಲ್ಲಿ ಆಶಾಂತಿ ಮೂಡಿಸುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮತ್ತು ಕೆಲವು ಮಾಧ್ಯಮಗಳಲ್ಲಿ ಸುಳ್ಳು ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಇಂತಹ ಸುಳ್ಳು ವದಂತಿಗಳಿಗೆ ನಾಗರಿಕರು ಕಿವಿಗೊಡದಂತೆ ಮನವಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಯಾವುದೇ ಘಟನೆಗಳಾಗಿಲ್ಲ. ಕೆಲವು ಕಿಡಿಗೇಡಿಗಳಿಂದ ಸುಳ್ಳು ವದಂತಿ ಹಬ್ಬಿ ರಾಜ್ಯದ ಮೂಲೆ ಮೂಲೆಗಳಿಂದ ನಮ್ಮನ್ನು ಹಲವರು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ನಾವು ಸಹ ದಾವಣಗೆರೆಯಲ್ಲಿ ಯಾವುದೇ ಘಟನೆಗಳಾಗಿಲ್ಲ. ಆದರೂ ಜಿಲ್ಲಾಡಳಿತ ಯಾವುದೇ ಅಹಿತಕರ ಘಟನೆಗಳು ಆಗದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂಬುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಈಗಾಗಲೇ ಕೊರೊನಾ ಮತ್ತಿತರ ಕಾರಣಗಳಿಂದ ವ್ಯಾಪಾರ- ವಹಿವಾಟುಗಳಿಗೆ ಧಕ್ಕೆ ಆಗಿ ಜೀವನ ನಡೆಸುವುದೇ ದುಸ್ತರವಾಗಿದೆ. ಇದೀಗ ಇಂತಹ ಘಟನೆಗಳಿಂದ ಮತ್ತಷ್ಟು ಸಂಕಷ್ಟವನ್ನು ದಾವಣಗೆರೆ ಜನತೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
