ಟ್ರಿಬ್ಯುನಲ್ ನೇಮಕಾತಿ: ಶಿಫಾರಸಾದ ಹೆಸರುಗಳಲ್ಲಿ ಹೆಕ್ಕುವುದೇನಿದೆ?; ಸರ್ಕಾರಕ್ಕೆ ಸುಪ್ರೀಂ ತೀವ್ರ ತರಾಟೆ

ನವದೆಹಲಿ: ಟ್ರಿಬ್ಯುನಲ್ ನೇಮಕಾತಿಗಳಿಗೆ ತಾನು ಶಿಫಾರಸು ಮಾಡಿರುವ ಹೆಸರುಗಳನ್ನು ನೋಡಿ ನೋಡಿ ಆರಿಸಿದ ಸರ್ಕಾರದ ನಡೆಯನ್ನು ಸುಪ್ರಿಂ ಕೋರ್ಟ್ ಬುಧವಾರ ಟೀಕಿಸಿದೆ. ಮಾತ್ರವಲ್ಲ, ನೇಮಕಾತಿ ಪೂರ್ಣಗೊಳಿಸಲು ಸರ್ಕಾರಕ್ಕೆ ಇನ್ನೆರಡೇ ವಾರಗಳ ಗಡುವನ್ನು ಕೊಟ್ಟಿದೆ.
ರಾಷ್ಟ್ರೀಯ ಕಂಪನಿ ಕಾಯಿದೆ ಟ್ರಿಬ್ಯುನಲ್ (ಎನ್ಸಿಎಲ್ಟಿ) ನೇಮಕಾತಿಯನ್ನು ಗಮನಿಸಿದ್ದೇನೆ. ಬಹುತೇಕ ಹೆಸರುಗಳನ್ನು ಶಿಪಾರಸು ಮಾಡಲಾಗಿದೆ. ಆದರೆ ನೋಡಿ ನೋಡಿ ಆಯ್ದುಕೊಂಡಂತೆ ನೇಮಕಾತಿ ಆಗಿದೆ. ಇದು ಯಾವ ಬಗೆಯ ಆಯ್ಕೆ ಎಂದು ಪ್ರಶ್ನಿಸಿದ ಸಿಜೆಐ ಎನ್ವಿ ರಮಣ, ಆದಾಯ ತೆರಿಗೆ ಮೇಲ್ಮನವಿ ಟ್ರಿಬ್ಯುನಲ್ (ಐಟಿಎಟಿ) ಸದಸ್ಯರ ವಿಚಾರದಲ್ಲಿಯೂ ಇದೇ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ನಿರ್ದಿಷ್ಟ ಶಿಫಾರಸುಗಳನ್ನು ಅನುಸರಿಸಲು ಸರ್ಕಾರಕ್ಕೆ ಅವಕಾಶವಿದೆ ಎಂದರು.
ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾದರೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳೂ ಇರುವಂಥ ಆಯ್ಕೆ ಸಮಿತಿಯ ಅಗತ್ಯ ಮತ್ತು ಹಿರಿಮೆ ಏನು ಎಂದು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಪ್ರಶ್ನಿಸಿದರು.
ನೀವು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವ ರೀತಿಯ ಬಗ್ಗೆ ನಮಗೆ ಅಸಮಾಧಾನವಿದೆ ಎಂದು ಸಿಜೆಐ ರಮಣ ಹೇಳಿದರು.
ಎನ್ಸಿಎಲ್ಟಿ ಆಯ್ಕೆ ಸಮಿತಿಯಲ್ಲಿ ನಾನೂ ಇದ್ದೆ. 11 ಮಂದಿ ನ್ಯಾಯಾಂಗೀಯ ಸದಸ್ಯರು ಮತ್ತು 10 ಮಂದಿ ತಾಂತ್ರಿಕ ಸದಸ್ಯರ ಆಯ್ಕೆಗಾಗಿ 554 ಮಂದಿಯನ್ನು ಸಂದರ್ಶಿಸಲಾಯಿತು. ನಾವು ಮಾಡಿದ ಶಿಫಾರಸುಗಳಲ್ಲಿ ಕೆಲವರನ್ನಷ್ಟೇ ಸರ್ಕಾರ ನೇಮಿಸಿದೆ ಎಂದರು.
ಸಂದರ್ಶನ ನಡೆಸಲು ದೇಶಾದ್ಯಂತ ಓಡಾಡಿದೆವು. ಹಾಗಾದರೆ ನಾವು ನಮ್ಮ ಸಮಯವನ್ನು ವ್ಯರ್ಥ ಮಾಡಿದೆವೆ? ಎಂದು ಕಟುವಾಗಿಯೇ ಅವರು ಪ್ರಶ್ನಿಸಿದರು. ಸರ್ಕಾರ ಕೇಳಿಕೊಂಡಿದೆ ಎಂಬ ಕಾರಣಕ್ಕಾಗಿ ಕೋವಿಡ್ ಸ್ಥಿತಿಯ ನಡುವೆಯೂ ನಾವು ಓಡಾಡಿದ್ದೇವೆ ಎಂದ ಅವರು, ಸರ್ಕಾರದ ನಡೆ ಅತ್ಯಂತ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
