ಪೊದೆಯ ಸುತ್ತ ಬಡಿಯುವ ಕೆಲಸ ಬೇಡ; ಪೆಗಾಸಸ್ ಕೇಸ್ನಲ್ಲಿ ಕೇಂದ್ರದ ನಡೆಗೆ ಸುಪ್ರೀಂ ತೀವ್ರ ಅಸಮಾಧಾನ; 2-3 ದಿನಗಳಲ್ಲಿ ಮಧ್ಯಂತರ ತೀರ್ಪು

ನವದೆಹಲಿ: ಪೆಗಾಸಸ್ ಗೂಢಚರ್ಯೆ ವಿಚಾರವಾಗಿ ತಕರಾರೆತ್ತಿರುವ ಅರ್ಜಿಗಳ ಸಂಬಂಧ ರಾಷ್ಟ್ರೀಯ ಭದ್ರತೆ ಕಾರಣದಿಂದ ವಿವರವಾದ ಅಫಿಡವಿಟ್ ಸಲ್ಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್ಗೆ ಸೋಮವಾರ ಹೇಳಿದೆ. ಸರ್ಕಾರದ ಈ ನಡೆಗೆ ಸಿಜೆಐ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಇಸ್ರೇಲಿ ನಿರ್ಮಿತ ಸಾಫ್ಟ್ವೇರ್ ಪೆಗಾಸಸ್ ಬಳಸಿ ದೇಶದ ನಾಗರಿಕರ ಮೊಬೈಲ್ ಫೋನ್ಗಳ ಮೇಲೆ ಅಕ್ರಮ ಕಣ್ಗಾವಲು ನಡೆಸಲಾಗಿದೆ ಎಂದು ಆರೋಪ ಮಾಡಿದ್ದ ಅರ್ಜಿಗಳ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸರ್ಕಾರ ತನ್ನ ಪ್ರತಿಕ್ರಿಯೆ ಸಲ್ಲಿಸಲು ಎರಡು ಬಾರಿ ಕಾಲಾವಕಾಶ ತೆಗೆದುಕೊಂಡಿತ್ತು.
ಈ ವಿಚಾರವಾಗಿ ಹೇಳಿಕೆಯನ್ನು ಅಫಿಡವಿಟ್ ಮೂಲಕ ಸಲ್ಲಿಸುವುದು ಸಾಧ್ಯವಿಲ್ಲ ಎಂಬುದು ಸರ್ಕಾರದ ನಿಲುವಾಗಿದೆ. ಯಾವ ಸಾಫ್ಟ್ವೇರ್ ಬಳಕೆಯಾಯಿತೆಂಬುದು ಭಯೋತ್ಪಾದಕರಿಗೆ ಗೊತ್ತಾಗದಂತೆ ಎಚ್ಚರವಹಿಸಬೇಕಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ರಾಷ್ಟ್ರೀಯ ಭದ್ರತೆ ಕುರಿತ ಕಳಕಳಿ ಸರಿ. ಆದರೆ ವ್ಯಕ್ತಿಗತ ಫೋನ್ಗಳು ಹ್ಯಾಕ್ ಆಗಿರುವ ಕುರಿತ ಆರೋಪಕ್ಕೆ ಉತ್ತರಿಸಲು ಸರ್ಕಾರವನ್ನು ಕೇಳಲಾಗಿದೆ ಎಂದು ನೆನಪಿಸಿತು. ಕಾಲಾವಕಾಶ ನೀಡಿದ್ದೇ ಈ ಕುರಿತು ಉತ್ತರಿಸುವುದಕ್ಕಾಗಿ. ನೀವೀಗ (ಸರ್ಕಾರ) ಹೀಗೆ ಹೇಳುತ್ತಿದ್ದೀರಿ. ನಾವು ಮತ್ತೆ ಹೇಳುತ್ತಿದ್ದೇವೆ. ನಾನು ರಾಷ್ಟ್ಋಇಯ ಭದ್ರತೆ ವಿಚಾರವಾಗಿ ಏನನ್ನೂ ತಿಳಿಯಲು ಬಯಸುತ್ತಿಲ್ಲ. ಪ್ರಶ್ನೆ ಇರುವುದು, ನಾಗರಿಕರ ಫೋನ್ಗಳು ಹ್ಯಾಕ್ ಆಗಿವೆ ಎಂಬುದರ ಬಗ್ಗೆ ಎಂದು ಸಿಜೆಐ ಎನ್ವಿ ರಮಣ ಒತ್ತಿಹೇಳಿದರು.
ಕಳೆದ ಬಾರಿಯೂ ರಾಷ್ಟ್ರೀಯ ಭದ್ರತೆ ಕುರಿತ ವಿಚಾರ ಪ್ರಸ್ತಾಪವಾಗಿತ್ತು. ಮತ್ತು ಆ ವಿಚಾರಕ್ಕೆ ಧಕ್ಕೆಯಾಗುವಂಥ ರೀತಿಯಲ್ಲಿ ಕೋರ್ಟ್ ಇಲ್ಲವೆ ಯಾವುದೇ ವೇದಿಕೆಗಳು ಮಧ್ಯಪ್ರವೇಶಿಸುವುದಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಡಲಾಗಿತ್ತು. ಆದರೆ ವ್ಯಕ್ತಿಗತ ಫೋನ್ಗಳು ಹ್ಯಾಕ್ ಆಗಿವೆಯೆಂಬ ಆರೋಪಗಳಿವೆ. ಅದರ ಸಂಬಂಧ ನಿಮ್ಮ ಅಫಿಡವಿಟ್ ಸಲ್ಲಿಸಿ. ಅದು ಹೌದೇ ಅಲ್ಲವೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ಕೋರ್ಟ್ ಸೂಚಿಸಿತು. ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳಿರುವುದರ ಬಗ್ಗೆ ಕೋರ್ಟ್ ಹೇಳಿತು.
ನಾವು ಈ ಬಗ್ಗೆ ಏನಾದರೂ ಮಾಡಲೇಬೇಕಿದೆ. ನಿಮಗೆ ಇನ್ನೂ ಏನಾದರು ಹೆಳುವುದಿದೆಯೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೋರ್ಟ್ ಪ್ರಶ್ನಿಸಿತು. ಇಲ್ಲವೆಂದು ಮೆಹ್ತಾ ಉತ್ತರಿಸಿದರು. ನಂತರ ಪ್ರತಿಕ್ರಿಯಿಸಿದ ಸಿಜೆಐ, ನೀವು ಪೊದೆಯ ಸುತ್ತ ಬಡಿಯುವ ಕೆಲಸ ಮಾಡುತ್ತಿದ್ದೀರಿ. ಅದರಿಂದ ಸಮಸ್ಯೆ ಬಗೆಹರಿಯದು. ನಾವು ಈ ಸಂಬಂಧ ಏನು ಆದೇಶ ಕೊಡಬೇಕೆಂದು ನಿರ್ಧರಿಸುತ್ತೇವೆ ಎಂದರು.
ಪೆಗಾಸಸ್ ವಿಚಾರದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಇನ್ನೆರಡು ಮೂರು ದಿನಗಳೊಳಗೆ ಆದೇಶ ಪ್ರಕಟಿಸುವುದಾಗಿ ಹೇಳಿತು. ಅದಾಗ್ಯೂ, ಸರ್ಕಾರಕ್ಕೆ ಒಂದು ಸಣ್ಣ ವಿನಾಯಿತಿಯನ್ನು ನೀಡಿದ ಪೀಠ, ಅಫಿಡವಿಟ್ ಸಲ್ಲಿಸುವ ಬಗ್ಗೆಯೇನಾದರೂ ನಿರ್ಧರಿಸಿದಲ್ಲಿ ಅಷ್ಟರೊಳಗೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸೂಚಿಸಿತು.
