
ಬೆಂಗಳೂರು: ಸೋಮವಾ ಆರಂಭವಾದ ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಲ್ಕನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ಆಡಳಿತ ಪಕ್ಷದ ಮೊದಲ ಸಾಲಿನ ಮೊದಲ ಕುರ್ಚಿಯಲ್ಲಿ ಕೂರುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ನಾಲ್ಕನೇ ಸಾಲಿನಲ್ಲಿ ಅವರ ಕುರ್ಚಿ ನಿಗದಿಪಡಿಸಲಾಗಿದೆ. ಮಾಜಿ ಸಿಎಂ ಆದವರು ಸದನದ ಸದಸ್ಯರಾಗಿ ಮುಂದುವರಿದಿದ್ದರೆ ಸದನದಲ್ಲಿ ಅವರು ಅಪೇಕ್ಷಿಸುವ ಕಡೆ ಕುರ್ಚಿ ನಿಗದಿಪಡಿಸುವ ಅವಕಾಶ ಇದೆ.
ಯಡಿಯೂರಪ್ಪ ಅವರೊಂದಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ನಾಲ್ಕನೇ ಸಾಲಿನಲ್ಲಿ ಅಸೀನರಾಗಿದ್ದರು. ಆಡಳಿತ ಪಕ್ಷದ ಪ್ರಮುಖ ನಾಯಕರ ಕುರ್ಚಿಗಳು ಅದಲು ಬದಲಾಗಿವೆ.
ಕಳೆದ ಅಧಿವೇಶನದಲ್ಲಿ ಎರಡನೇ ಸಾಲಿನಲ್ಲಿ ಕೂರುತ್ತಿದ್ದ ಬಸವರಾಜ ಬೊಮ್ಮಾಯಿ ಅವರು ಇದೀಗ ಮುಖ್ಯಮಂತ್ರಿಯಾಗಿರುವುದರಿಂದ ಆಡಳಿತ ಪಕ್ಷದ ಮೊದಲ ಸಾಲಿನ ಒಂದನೇ ಕುರ್ಚಿಯಲ್ಲಿ ಕುಳಿತಿದ್ದರು. ಮೂರನೇ ಸಾಲಿನಲ್ಲಿ ಇರುತ್ತಿದ್ದ ಗೃಹ ಸಚಿವ ಆರಗಜ್ಞಾನೇಂದ್ರ ಅವರು ಮೊದಲ ಸ್ಥಾನಕ್ಕೆ ಮುಂಬಡ್ತಿ ಪಡೆದಿದ್ದರು. ಕಳೆದ ಅಧಿವೇಶನ ಸಂದರ್ಭದಲ್ಲಿ ಎರಡನೇ ಸಾಲಿಗೆ ಹಿಂಬಡ್ತಿ ಪಡೆದಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಈ ಅಧಿವೇಶನದಲ್ಲಿ ಮೊದಲ ಸಾಲಿಗೆ ಬಂದಿದ್ದಾರೆ.
ಈವರೆಗೂ ನಾಲ್ಕನೆ ಸಾಲಿನಲ್ಲಿ ಕೂರುತ್ತಿದ್ದ ಸಚಿವರಾದ ವಿ.ಸುನೀಲ್‍ಕುಮಾರ್, ಬಿ.ಸಿ.ನಾಗೇಶ್, ಹಾಲಪ್ಪ ಆಚಾರ್, ಮುನಿರತ್ನ ಮತ್ತಿತರರು ಎರಡನೆ ಸಾಲಿಗೆ ಮುಂಬಡ್ತಿ ಪಡೆದಿದ್ದಾರೆ.




