ಮಗನನ್ನು ಸೋಲಿಸಿದ್ದಕ್ಕೆ ಸುಮಲತಾ ವಿರುದ್ಧ ಕುಮಾರಸ್ವಾಮಿ ರಾಜಕೀಯ; ಸಿದ್ದರಾಮಯ್ಯ ಟೀಕೆ

ಹುಬ್ಬಳ್ಳಿ: ಮಗನನ್ನು ಸೋಲಿಸಿದರು ಎಂಬ ಕಾರಣಕ್ಕೆ ಸುಮಲತಾ ವಿರುದ್ಧ ಕುಮಾರಸ್ವಾಮಿ ರಾಜಕಾರಣಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆ.ಆರ್.ಎಸ್. ಬಿರುಕು ಬಿಟ್ಟಿದೆಯೋ ಇಲ್ಲವೊ ಗೊತ್ತಿಲ್ಲ ಆದರೆ ಎಂಜಿನಿಯರ್‌ಗಳು ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರ. ಸುಮಲತಾ ಅವರು ಅಕ್ರಮ ಗಣಿಗಾರಿಕೆ ಬಗ್ಗೆಯೂ ಹೇಳಿದ್ದಾರೆ. 20 ಕಿಲೋ ಮೀಟರ್ ಒಳಗೆ ಗಣಿಗಾರಿಕೆ ನಡೀತಿದೆ ಅದೂ ಜೆಡಿಎಸ್ ನವರಿಗೆ ಸೇರಿದೆ ಎಂಬ ಆರೋಪ ಮಾಡಿದ್ದಾರೆ. ಅಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕೃಷಿ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಡಳಿತ ಪಕ್ಷ ಇದರ ಬಗ್ಗೆ ಮಾತನಾಡುತ್ತಿಲ್ಲ, ಸರ್ಕಾರದ ನಡೆ ನೋಡಿದ್ದರೆ ಅಕ್ರಮ ಗಣಿಗಾರಿಕೆಯಲ್ಲಿ ಆಡಳಿತ ಪಕ್ಷದವರು ಶಾಮೀಲಾಗಿರಬೇಕು ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ, ಈ ಸರ್ಕಾರಕ್ಕೆ ಒಂದಿಷ್ಟು ಮಾನ, ಮರ್ಯಾದೆ, ನಾಚಿಕೆ ಏನೂ ಇಲ್ಲಾ,
ಇದೊಂದು ಲಜ್ಜೆಗೆಟ್ಟ ಸರ್ಕಾರವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಾ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರಕ್ಕೆ ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ಮಾಡೋಕೆ ಅನೂಕೂಲವಾಗಿದೆ, ಕೋವಿಡ್ ಸಂದರ್ಭದಲ್ಲಿ ಪ್ರತಿಪಕ್ಷಗಳು ಸಹ ಪ್ರತಿಭಟನೆ ಮಾಡೋಕೆ ಬರಲ್ಲ ಅನ್ನೋದು ಗೊತ್ತಿದೆ, ಹಾಗಾಗಿ ಕೋವಿಡ್ ಆಶ್ರಯ ಪಡೆದು ಸರ್ಕಾರ ವ್ಯಾಪಕ ಭ್ರಷ್ಟಾಚಾರ ಮಾಡಿದೆ, ಈಗಲೂ ಮಾಡುತ್ತಿದೆ. ಹೀಗಿರುವಾಗ ಪ್ರತಿಕ್ಷವಾಗಿ ಆಡಳಿತ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತಾಡೋದು ತಪ್ಪಾ..? ಅಲ್ಲದೆ ಮಾಲಿನ್ಯ ಮಂಡಳಿಯ ಅಧಿಕಾರಿಯನ್ನು ವರ್ಗಾವಣೆ ಮಾಡೋಕೆ 16 ಕೋಟಿ ಡೀಲಿಂಗ್ ಈ ಸರ್ಕಾರ ಮಾಡಿದ್ದು ಸುಳ್ಳಾ ಎಂದು ಪ್ರಶ್ನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದರು.
ಮುಂದಿನ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧೆ
ನಾನು ಮುಂದಿನ ಬಾರಿಯೂ ಬದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೇನೆ , ಬೇರೆ ಬೇರೆ ಕಡೆ ಸ್ಪರ್ಧಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿರುವುದು ನಿಜ, ಆದರೆ ನಾನು ಮಾತ್ರ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೇ ಅಖಾಡಕ್ಕಿಳಿಯುತ್ತೇನೆ, ನಮ್ಮ ಪಕ್ಷದಲ್ಲಿ ಯಾವುದೇ ಬಣಗಳು-ಗುಂಪುಗಾರಿಕೆ ಇಲ್ಲಾ, ಉಪಚುನಾವಣೆಗಳ ದಿನಾಂಕ ಘೋಷಣೆಯ ನಂತರ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಜಾತಿ ಸಮೀಕ್ಷೆ ನಡೆದು ಎರಡೂವರೆ ವರ್ಷ ಆಯ್ತು. ಅದರ ವರದಿಯನ್ನ ಸಲ್ಲಿಕೆ ಮಾಡಲಾಗಿದೆ. ಆ ಕುರಿತು ಸದನದಲ್ಲಿ ಚರ್ಚೆ ಆಗುತ್ತಿಲ್ಲ. ಚರ್ಚೆ ಮಾಡಿದ್ರೆ ಸಾಮಾಜಿಕ ನ್ಯಾಯ ಒದಗಿಸಬೇಕಾಗುತ್ತದೆ ಹೀಗಾಗಿ ಆಡಳಿತ ಪಕ್ಷ ಆ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಕುಟುಕಿದರು.
