
ಬೆಂಗಳೂರು: ಜನಸಾಮಾನ್ಯರ ಮೇಲಿನ ತೆರಿಗೆ ಭಾರ ಹೆಚ್ಚುತ್ತಿರುವ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯರಿಗಾಗಿ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ವಿತ್ತೀಯ ಕಲಾಪ, ವಿಧೇಯಕಗಳು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಅಭಿವೃದ್ಧಿಯ ಪಾಲುದಾರಿಕೆ ಕುರಿತು ಅವರು ಭಾಷಣ ಮಾಡಿದರು.
ಇತ್ತೀಚೆಗೆ ಶ್ರೀಮಂತರ ಮೇಲೆ ವಿಧಿಸುವ ತೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ಬಡವರ ಮೇಲಿನ ತೆರಿಗೆಯ ಹೊರೆ ಹೆಚ್ಚಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇ.75 ಹಾಗೂ ಜನ ಸಾಮಾನ್ಯರ ಮೇಲಿನ ತೆರಿಗೆ ದರ ಶೇ.25 ಇತ್ತು. ಈಗ ಇದು ಅದಲು ಬದಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ತೆರಿಗೆ ಬಡವರ ಕಲ್ಯಾಣಕ್ಕೆ
ರಾಜರ ಕಾಲದಲ್ಲಿ ತೆರಿಗೆ ಕಂದಾಯದ ರೂಪದಲ್ಲಿ ಬರುತ್ತಿತ್ತು. ಭೂ ಕಂದಾಯ ಅದರಲ್ಲಿ ಪ್ರಮುಖವಾಗಿತ್ತು. ಶ್ರೀಮಂತರು ಮಾತ್ರ ತೆರಿಗೆ ಕೊಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅನೇಕ ಆರ್ಥಿಕ ತಜ್ಞರು ಈ ಹಿಂದೆ ಪ್ರತಿಪಾದಿಸಿದ್ದರು. ಶ್ರೀಮಂತರಿಂದ ತೆರಿಗೆ ವಸೂಲಿ ಮಾಡಿ ಅದನ್ನು ಬಡವರ ಕಲ್ಯಾಣಕ್ಕೆ ವಿನಿಯೋಗಿಸಬೇಕು ಎಂಬುದು ಅವರ ನಿಲುವು. ಇದು ಕಲ್ಯಾಣ ರಾಷ್ಟ್ರದ ಮೂಲ ತತ್ವವೂ ಆಗಿತ್ತು ಎಂದರು.
ನಮ್ಮಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ರಾಜನಾದವನು ತೋಟ ಕಾಯುವ ಮಾಲಿ ರೀತಿ ಇರಬೇಕು. ಇದ್ದಲು ಮಾರುವ ವ್ಯಾಪಾರಿ ರೀತಿ ಆಗಬಾರದು ಎಂದು ಭೀಷ್ಮ ಧರ್ಮರಾಯನಿಗೆ ಉಪದೇಶಿಸಿದ್ದರು. ದುಂಬಿ ಮಕರಂದವನ್ನು ಹೀರಿದಂತೆ, ಹಾಲು ಕರೆಯುವಾಗ ಕುರುವಿಗೂ ಸ್ವಲ್ಪ ಮೀಸಲಿಡುವಂತೆ ತೆರಿಗೆ ವಿಧಿಸಬೇಕು. ಇದರ ಅರ್ಥ ಬಡವರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ತೆರಿಗೆ ವಿಧಿಸಬೇಕು ಎಂಬುದಾಗಿತ್ತು.
ಬಜೆಟ್ ವಾಸ್ತವಿಕವಾಗಿರಬೇಕು
ಬಜೆಟ್ ಅತ್ಯಂತ ಪ್ರಮುಖವಾದದ್ದು. ಕಾಯಕ ಮತ್ತು ದಾಸೋಹ ಇದರ ಅರ್ಥ. ಅಂದರೆ, ಉತ್ಪಾದನೆ ಮತ್ತು ಹಂಚಿಕೆ. ೧೨ನೇ ಶತಮಾನದಲ್ಲಿಯೇ ಬಸವಾದಿ ಶರಣರು ಹೀಗೆ ವ್ಯಾಖ್ಯಾನಿಸಿದ್ದರು. ಬಜೆಟ್‌ನಲ್ಲಿನ ಅಂಕಿ-ಅಂಶಗಳು ಅಲಂಕಾರಿಕ ಹಾಗೂ ಪದಗಳ ಪ್ರಯೋಗ ಆಕರ್ಷವಾಗಿದ್ದರೆ ಸಾಲದು. ಮುಂಗಡ ಪತ್ರ ವಾಸ್ತವಿಕತೆಯ ಆಧಾರದ ಮೇಲೆ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಲಾಪಗಳಲ್ಲಿ ತಪ್ಪದೇ ಭಾಗವಹಿಸಿ
ವಿಧೇಯಕಗಳ ಮಹತ್ವದ ಕುರಿತು ಮಾತನಾಡಿದ ಸಿದ್ದರಾಮಯ್ಯ , ಸಾಮಾಜಿಕ ನ್ಯಾಯ ಹಾಗೂ ಅಶಕ್ತರ ಕಲ್ಯಾಣಕ್ಕಾಗಿ ವಿಧೇಯಕಗಳನ್ನು ರೂಪಿಸಬೇಕು. ಶಾಸಕರು ಅದರಲ್ಲಿ ತಪ್ಪದೇ ಭಾಗಿಯಾಗಬೇಕು. ಮೊದಲ ಬಾರಿ ಶಾಸಕರಾದವರು ನಾವು ಒಂದು ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದರೆ ಸಾಕು ಎನ್ನುತ್ತಾರೆ. ಒಂದು ಬಾರಿ ವಿಧಾನಸೌಧ ಪ್ರವೇಶಿಸಿದ ಬಳಿಕ ಅತ್ತ ಸುಳಿಯುವುದಿಲ್ಲ. ವಿಧಾನ ಮಂಡಲದ ಕಾರ್ಯ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸಚಿವ ಜೆ.ಸಿ. ಮಾಧುಸ್ವಾಮಿ ಭಾಗವಹಿಸಿದ್ದರು.
