ನಾಲಾ ಕೊನೇ ಭಾಗಕ್ಕೂ ಸಿಗಲಿ ಕಾವೇರಿ ನೀರು: ಸಚಿವರಿಗೆ ಶಾಸಕ ದಿನೇಶ್ ಪತ್ರ

ಬೆಂಗಳೂರು: ಕೃಷ್ಣರಾಜ ಸಾಗರ ಜಲಾಶಯದಿಂದ ಮಂಡ್ಯ ಜಿಲ್ಲೆ ಮದ್ದೂರು, ಮಳವಳ್ಳಿ ಹಾಗೂ ನಾಲಾ ಕೊನೆಯ ಭಾಗದವರೆಗೂ ಸಮರ್ಪಕವಾಗಿ ನೀರು ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ವಿಧಾನಪರಿಷತ್ ನೂತನ ಸದಸ್ಯ ದಿನೇಶ್ ಗೂಳಿಗೌಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಅವರು, ಕೆಆರ್ ಎಸ್ ನಾಲಾ ಭಾಗದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಬೆಳೆಗಳಿಗೆ ಕಟ್ಟು ಪದ್ದತಿಯಲ್ಲಿ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ಆದೇಶಿಸಿರುವುದನ್ನು ಸ್ವಾಗತಿಸಿದ್ದಾರೆ.
ತ್ವರಿತಗತಿಯ ನರೇಗಾ ಕಾಮಗಾರಿ
ಉದ್ಯೋಗ ಖಾತ್ರಿ ಯೋಜನೆಗಳಡಿ ನಡೆಯುತ್ತಿರುವ ಕಾಮಗಾರಿಗಳು ತ್ವರಿತಗತಿಯಲ್ಲಾಗಬೇಕು. ಎಲ್ಲ ಕಾಮಗಾರಿಗಳು ಚುರುಕಾಗಿ ನಡೆಯಬೇಕಿದೆ. ಈ ಮೂಲಕ ಉದ್ಯೋಗಕ್ಕೂ ಹೆಚ್ಚಿನ ಮಹತ್ವವನ್ನು ನೀಡದಂತಾಗಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಚಿವರನ್ನು ದಿನೇಶ್ ಪತ್ರಮುಖೇನ ಕೋರಿದ್ದಾರೆ.
