Breaking NewsLatestರಾಜಕೀಯ

ಸುಳ್ಳು ಹೇಳಿರುವುದೊಂದೇ ಮೋದಿ ಸರ್ಕಾರದ ಸಾಧನೆ: ಸಿದ್ದರಾಮಯ್ಯ

ಬೆಂಗಳೂರು: ಸುಳ್ಳು ಹೇಳಿರುವುದೊಂದೇ ಮೋದಿ ಸರ್ಕಾರದ ಒಟ್ಟು ಸಾಧನೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸ್ವಾತಂತ್ರ್ಯ ಭಾರತದಲ್ಲಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಸಾವರ್ಕರ್​ರಿಂದ ಹಿಡಿದು ಭಾರತೀಯ ಜನತಾ ಪಕ್ಷದ ಯಾವೊಬ್ಬ ನಾಯಕನೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ ಎಂದೂ ಅವರು ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ದಿನದ ಸ್ಮರಣಾರ್ಥ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೋದಿಯವರ ಏಳು ವರ್ಷಗಳ ಆಡಳಿತದಲ್ಲಿ ಸಾಮಾನ್ಯ ಜನ ಬಡತನ ರೇಖೆಗಿಂತ ಮೇಲೆ ಹೋಗಬೇಕಿತ್ತು. ಆದರೆ 23% ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ಹನ್ನೆರಡು ಕೋಟಿ ಉದ್ಯೋಗ ನಷ್ಟವಾಗಿದೆ, ದೇಶದ ಜಿ.ಡಿ.ಪಿ -7.7 ಕ್ಕೆ ಬಂದಿದೆ. ಇದು ದೇಶಕ್ಕೆ ಮೋದಿಯವರ ಕೊಡುಗೆ. ಜನರ ಜೀವನ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದೆ ಎಂದರು.

ತ್ಯಾಗ ಬಲಿದಾನಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ತೊರೆದು ಹೋದವರು ಸೈದ್ಧಾಂತಿಕ ಬದ್ಧತೆಯಿಲ್ಲದವರು. ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯವರು ಸಮಾನತೆಯ ವಿರೋಧಿಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಶಯಗಳಾದ ಸಾಮಾಜಿಕ ಬದಲಾವಣೆ, ಸಮಾನ ಅವಕಾಶಗಳು, ಎಲ್ಲಾ ವರ್ಗದ ಜನರನ್ನು ಮುಖ್ಯವಾಹಿನಿಗೆ ತರುವ, ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಬಿಜೆಪಿಗೆ ನಂಬಿಕೆಯಿಲ್ಲ. ಅದು ನಂಬಿಕೆ ಹೊಂದಿರುವುದು ಚಾತುರ್ವರ್ಣ ವ್ಯವಸ್ಥೆಯ ಬಗ್ಗೆ. ಈ ಕಾರಣಕ್ಕಾಗಿ ಸಮಾಜವನ್ನು ಒಡೆದು, ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಮ್ಮ‌ ಸರ್ಕಾರದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದ್ದೆವು. ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನವರು ಹಿಂದುವಲ್ಲವೇ? ಹಣಕಾಸು ಮಂತ್ರಿಯಾಗಿದ್ದ ಕೃಷ್ಣಸ್ವಾಮಿ ಹಿಂದುವಲ್ಲವೇ? ಮೊಘಲರ ಆಳ್ವಿಕೆಯಲ್ಲಿ ಅವರ ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದ ಜನರೇ ಇಂದು ಆರ್.ಎಸ್.ಎಸ್ ನ ನಾಯಕರಾಗಿದ್ದಾರೆ. ಈಗ ಇವರು ಭಾರತೀಯತೆ, ದೇಶಭಕ್ತಿಯ ಪಾಠ ಮಾಡುತ್ತಾರೆ. ಟಿಪ್ಪು ಜಯಂತಿ ಆಚರಣೆ ಮಾಡಿದ ಕಾರಣಕ್ಕೆ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಿದರು. ಟಿಪ್ಪು ಮಾಡಿದ ದೇಶದ್ರೋಹ ಏನು? ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಟಿಪ್ಪು ಮೇಲಿರುವ ಮೇಲಿರುವ ಕೋಪ ಪೂರ್ಣಯ್ಯನ ಮೇಲೆ ಏಕಿಲ್ಲ? ಇಂಥವರು ದೇಶ ಕಟ್ಟುತ್ತಾರಾ? ದೇಶದ ಸಂಪತ್ತನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹೋಗಿ ಇನ್ನೊಬ್ಬರು ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಾರಣ ಬೊಮ್ಮಾಯಿಯವರು ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್ ನಂತೆ. ಈಗ ಕಾಲ ಕೂಡಿ ಬರುತ್ತಿದೆ, ವ್ಯವಸ್ಥೆ ಹದಗೊಳ್ಳುತ್ತಿದೆ. ನಾವೆಲ್ಲಾ ಹೋರಾಟದ ಮನೋಭಾವದಿಂದ, ಒಟ್ಟಾಗಿ ಬಿಜೆಪಿಯನ್ನು ತೊಲಗಿಸಲು ಸಾಧ್ಯ.

ದೇಶದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ ಎಂಬುದು ನನ್ನ ಭಾವನೆ. ಎಂದರು ಸಿದ್ದರಾಮಯ್ಯ.

Spread the love

Related Articles

Leave a Reply

Your email address will not be published. Required fields are marked *

Back to top button