ಕೃಷಿ ಕಾಯ್ದೆ ರದ್ದು; ರೈತರ ಹೋರಾಟಕ್ಕೆ ಸಂದ ಗೆಲುವು: ಸಿದ್ದರಾಮಯ್ಯ

ಬೆಂಗಳೂರು: ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ದೇಶದ ಮಣ್ಣಿನ ಮಕ್ಕಳ ಅಭೂತಪೂರ್ವ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳಲ್ಲಿ ಜೈ ಕಿಸಾನ್ ಎಂದು ಟ್ಯಾಗ್ ಲೈನ್ ಹಾಕಿರುವ ಅವರು, ರೈತರಿಗೆ ಅಭಿನಂದನೆಗಳು ಎಂದಿದ್ದಾರೆ. ಕೃಷಿಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದ್ದಾರೆ.
ಕೃಷಿ ಕಾಯ್ದೆಯಷ್ಟೇ ಅಲ್ಲ, ಕೇಂದ್ರ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದು. ಇದು ವಿರಮಿಸುವ ಕಾಲ ಅಲ್ಲ, ರೈತ ವಿರೋಧಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ರೈತರ ಹೋರಾಟಕ್ಕೆ ಸಿಕ್ಕ ಗೆಲುವಿನ ಸ್ಪೂರ್ತಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
