Breaking NewsLatestಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಸಿದ್ದರಾಮಯ್ಯ ಕಳೆದ ಐದು ವರ್ಷ ಅಸಮರ್ಥರಾಗಿಯೇ ಅಧಿಕಾರ ನಡೆಸಿದ್ದಾರೆ: ಕಟೀಲ್ ಟಾಂಗ್

ಈ ಹಿಂದೆ ಸಿದ್ರಾಮಣ್ಣನವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ ಅಸಮರ್ಥ ನಾಯಕರಾಗಿಯೇ ಅಧಿಕಾರ ನಡೆಸಿದ್ದರು. ಅವರ ಆಡಳಿತ ಅವಧಿಯಲ್ಲಿಯೇ ಜೈಲಿನಲ್ಲಿ ಹತ್ಯೆಗಳು ನಡೆದವು, ಜೊತೆಗೆ ಪುಟ್ಟಪ್ಪನ ಹತ್ಯೆ ಆಯಿತು. ಟಿಪ್ಪು ಜಯಂತಿ ಹೆಸರಿನಲ್ಲಿ ಗಲಭೆಗಳು ನಡೆದವು. ಅಂದು ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೊಬ್ಬರನ್ನು ಬಂಧನ ಮಾಡಲಿಲ್ಲ. ಹಾಗಾಗಿ ಸಿದ್ರಾಮಣ್ಣನವರಿಗಿಂತ ನಮ್ಮ ಗೃಹ ಸಚಿವರು ಈಗ ಸಮರ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದರು.

ನಗರದ ಗಲಭೆ ಪೀಡಿತ ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಹಾಗೂ ಸಂಜೀವಿನಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕಾಲಾವಧಿಯಲ್ಲಿ ಕೇರಳದಿಂದ ಬಂದವರನ್ನು ಮೆರವಣಿಗೆ ಮಾಡಲಾಯಿತು. ಅವರ ಅವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿವೆ.

ಮಂಗಳೂರು ಜೈಲಿನಲ್ಲಿ ಡಬಲ್ ಮರ್ಡರ್ ಆಗಿತ್ತು. ‌ಅಂದೇ ಸಿದ್ದರಾಮಯ್ಯನವರು ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ, ಇಂದು ಇಂತಹ ಗಲಭೆಗಳು ಮರಳಿ ಆಗುತ್ತಿರಲಿಲ್ಲ. ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗೆ ದೈಹಿಕ ಶಕ್ತಿ ಇದೆ, ಬೌಧಿಕ ಶಕ್ತಿಯನ್ನು ಸಿದ್ದರಾಮಯ್ಯನವರು ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಹುಬ್ಬಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯ
ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಕೃತ್ಯವಾಗಿದೆ. ಈ ಘಟನೆ ನೋಡಿದರೆ ತಕ್ಷಣ ಆದ ಭಾವನೆಗಳ ಪ್ರತೀಕವಲ್ಲ. ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಸಂದೇಶ ಬಂದು ಹತ್ತೇ ನಿಮಿಷದಲ್ಲಿ ಸಾವಿರಾರು ಜನ ಸೇರುತ್ತಾರೆ. ದೊಡ್ಡ ದೊಡ್ಡ ಕಲ್ಲುಗಳ ಮೂಲಕ ದೇವಸ್ಥಾನ, ಮನೆ, ಆಸ್ಪತ್ರೆ ಮೇಲೆ ದಾಳಿ ಮಾಡುತ್ತಾರೆಂದರೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂಬುದು ಸ್ಪಷ್ಟವಾಗಿದೆ.

ವಿಶೇಷವಾಗಿ ದಂಧೆಕೋರರು ದೇವಸ್ಥಾನ ಮನೆಗಳನ್ನು ಬಿಟ್ಟು ಪೊಲೀಸರು ಹಾಗೂ ಪೋಲಿಸ್ ಇಲಾಖಾ ಜೀಪ್ ಗಳನ್ನು ಕೆಡವಿದನ್ನು ನೋಡಿದಾಗ ಇದರ ಹಿಂದೆ ಕಾಣದ ಕೈಗಳಿವೆ ಎಂಬುದು ಗೊತ್ತಾಗುತ್ತಿದೆ. ಯಾರ್ಯಾರು ಸಂಚುಕೋರರು ಇದ್ದಾರೆ ಅವರನ್ನು ಬಂಧಿಸುವ ಕೆಲಸ ಆಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪೋಲಿಸರು ತೆಗೆದುಕೊಂಡ ಕ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ತಕ್ಷಣ ಲಾಠಿ ಚಾರ್ಜ್ ಮಾಡಿ ಗಲಭೆ ನಿಲ್ಲಿಸುವ ಕೆಲಸ ಮಾಡಿದ್ದಾರೆ. ಅದರ ಹಿಂದಿರುವ ವ್ಯಕ್ತಿಗಳನ್ನು ಬಂಧಿಸುವ ಕೆಲಸ ಮಾಡಿದ್ದಾರೆ ಎಂದು‌ ತಿಳಿಸಿದರು.

ಕಾನೂನು ಭಂಗ ಮಾಡಿದವರನ್ನು ಜೈಲಿನಿಂದ ಯಾಕೆ ಬಿಟ್ಟರು?
ಸಿದ್ದರಾಮಯ್ಯ ಅವರು ಸಿಎಂ ಇದ್ದಾಗ ಕಾನೂನು ಭಂಗ ಮಾಡುವವರನ್ನು ಯಾಕೆ ಜೈಲಿನಿಂದ ಬಿಟ್ಟರು. ಅವರ ಕೇಸ್ ಗಳನ್ನು ತೆಗೆದು ಹಾಕಿದರು. ಅದಕ್ಕೆ ಸಿದ್ದರಾಮಯ್ಯ ಮೊದಲು ಉತ್ತರ ಕೊಡಲಿ. ಸಿಎಂ ಆಗಿ ಕಾನೂನು ಭಂಗ ಮಾಡುವವರಿಗೆ ರಕ್ಷಣೆ ಕೊಟ್ಟಿದ್ದಾರಲ್ಲಾ ಇವರಿಗೆ ನೈತಿಕತೆ ಎಲ್ಲಿದೆ. ಸಿದ್ದರಾಮಯ್ಯ ಅವರಿಗೆ ಗಲಭೆಗಳು ಆಗಿ ಅರಾಜಕತೆ ಸೃಷ್ಟಿ ಮಾಡುವುದು ಇದೆ. ಹಾಗಾಗಿ ಇದಕ್ಕೆ ಪ್ರೇರಣೆ ಅವರೇ ಇರಬಹುದು ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button