ಹಳೆಯ ಟ್ವೀಟ್ ಅಳಿಸಿದ ಶೋಭಾ; ಕೇಂದ್ರ ಸಚಿವೆಯಾಗಿ ಹೊಸ ಇನ್ನಿಂಗ್ಸ್ ಆರಂಭ

ಬೆಂಗಳೂರು: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಶೋಭಾ ಕರಂದ್ಲಾಜೆ, ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಎಲ್ಲ ಹಳೆಯ ಟ್ವೀಟ್ಗಳನ್ನು ಅಳಿಸಿದ್ದಾರೆ. ಇದರೊಂದಿಗೆ, ಕೇಂದ್ರ ಸಚಿವೆಯಾದ ಕ್ಷಣದಿಂದ ತಮ್ಮ ರಾಜಕೀಯ ಬದುಕಿನ ಹೊಸ ಇನ್ನಿಂಗ್ಸ್ ಆರಂಭದ ಸುಳಿವು ನೀಡಿದ್ದಾರೆ.
ಶೋಭಾ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮೊನ್ನೆ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಚಿತ್ರಗಳೊಂದಿಗೆ ಹೊಸ ಟ್ವೀಟ್ಗಳು ಕಾಣಿಸುತ್ತಿವೆ. ಆ ಸಂಸದರ್ಭವನ್ನು ಅವರು ತಮ್ಮ ರಾಜಕೀಯ ಜೀವನದ ಅತ್ಯಂತ ಮಹತ್ವದ ಘಳಿಗೆ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿ ನೇತೃತ್ವದಲ್ಲಿ ದಣಿವರಿಯದೆ ಕೆಲಸ ಮಾಡುವೆ ಎಂದು ಅವರು ತಮ್ಮ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ರಾಜಕಾರಣದಲ್ಲಿ ಶೋಭಾ ಕರಂದ್ಲಾಜೆಯವರನ್ನು ಯಡಿಯೂರಪ್ಪನವರ ನೆರಳಿನಲ್ಲಿಯೇ ಗುರುತಿಸುತ್ತಿದ್ದ ಕಾಲವಿತ್ತು. ಮತ್ತು ಶೋಭಾ ಕಟ್ಟಾ ಹಿಂದುತ್ವವಾದಿಯಂತೆ ಮಾತನಾಡುವುದು, ಎಲ್ಲದಕ್ಕೂ ಆ ಧಾಟಿಯಲ್ಲಿಯೇ ಪ್ರತಿಕ್ರಿಯಿಸುವುದು ಸಾಮಾನ್ಯವಾಗಿತ್ತು. ಈಗ ಅವರು ಯಡಿಯೂರಪ್ಪ ಕುಟುಂಬದಿಂದ ದೂರವಾಗಿ ಬಹಳ ಕಾಲವಾಗಿದೆ. ಮತ್ತು ಇಂಥ ಹೊತ್ತಲ್ಲೇ ಅವರು ಕೇಂದ್ರ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶೋಭಾ ಅವರ ರಾಜಕೀಯ ಬದುಕಿನಲ್ಲಿ ಇದು ಕೂಡ ಬಹಳ ಗಮನೀಯ ಅಂಶ.
ಉಡುಪಿ-ಚಿಕ್ಮಗಳೂರು ಸಂಸದೆಯಾಗಿ ಆಯ್ಕೆಯಾದ ಬಳಿಕವೂ ಶೋಭಾ ರಾಜಕೀಯ ಜೀವನದಲ್ಲಿ ಅಂಥ ಬದಲಾವಣೆಯೇನೂ ಆದಂತೆ ಕಾಣಿಸುತ್ತಿರಲಿಲ್ಲ. ತಮ್ಮ ಕ್ಷೇತ್ರದಿಂದಲೂ ಅವರು ದೂರವೇ ಉಳಿದುಬಿಟ್ಟಿದ್ದು ಕೂಡ ತೀವ್ರ ಟೀಕೆಗೆ ಮತ್ತೆ ಮತ್ತೆ ಒಳಗಾಗುತ್ತಲೇ ಇತ್ತು. ಶಂಸದೆಯನ್ನು ಹುಡುಕಿಕೊಡಿ ಎಂಬ ವ್ಯಂಗ್ಯ ಹಲವು ಬಾರಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದದ್ದು ಕೂಡ ಎಲ್ಲರಿಗೂ ಗೊತ್ತಿದೆ.
ಇಂಥ ಹೊತ್ತಲ್ಲಿಯೇ ಅವರಿಗೆ ಕೆಂದ್ರ ಸಚಿವೆ ಪಟ್ಟ ಒಲಿದುಬಂದಿದೆ. ಅದನ್ನೊಂದು ಮಹತ್ವದ ತಿರುವು ಎಂದು ಭಾವಿಸಿರುವ ಅವರು ಕೂಡ ಎಲ್ಲ ಜಳೆಯ ನೆರಳುಗಳ ಅಡಿಯಿಂದ ಹೊರಬಂದು ತಮ್ಮ ರಾಜಕೀಯ ಬದುಕಿನಲ್ಲಿ ಮುನ್ನಡೆಯುವ ಸೂಚನೆಯನ್ನೂ ನೀಡಿದ್ದಾರೆ.
